ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಲಾಗಿದೆ.
ಈ ಕುರಿತು ದೈನಿಕ್ ಭಾಸ್ಕರ್ ಪತ್ರಿಕೆಯು ವರದಿ ಮಾಡಿದ್ದು ವಕೀಲ ರಾಕೇಶ್‌ನಾಥ್ ಪಾಂಡೆ ಎನ್ನುವವರು ಸಿಆರ್‌ಪಿಸಿ ಸೆಕ್ಷನ್ 156(3)ರ ಅಡಿ ದಾಖಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಅವರು ಪ್ರಧಾನಿ ಕಚೇರಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿದೆ. ಸೆಕ್ಷನ್ 156(3) ಸಂಜ್ಞೇಯ ಪ್ರಕರಣಗಳಲ್ಲಿ ತನಿಖೆ ನಡೆಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಅವರಿಗೆ ನೀಡುತ್ತದೆ.
ಕಳೆದ ವರ್ಷ ಕಾಶ್ಮೀರದ ನೌಶೇರಾಗೆ ಪ್ರಧಾನಿಯವರು ತೆರಳಿದ್ದ ವೇಳೆ ಅವರು ಸೇನೆಯ ಸಮವಸ್ತ್ರವನ್ನು ಧರಿಸಿದ್ದರು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140ರ ಅಡಿ (ಸೈನಿಕರು, ನಾಕಾದಳದವರು ಅಥವಾ ವಾಯುದಳದವರ ಸಮವಸ್ತ್ರವನ್ನು ಧರಿಸುವುದು) ಅಪರಾಧ ಎಂದು ಪಾಂಡೆ ತಮ್ಮ ವಾದದ ವೇಳೆ ತಿಳಿಸಿದ್ದರು.
ಈ ಮೊದಲು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದರೆ, ತಮ್ಮ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣದ ನಡೆದಿಲ್ಲವಾಗಿ ಅದನ್ನು ಪರಿಗಣಿಸಲು ಸಾದ್ಯವಿಲ್ಲ ಎಂದು ಹೇಳಿದ್ದ ಮ್ಯಾಜಿಸ್ಟ್ರೇಟ್ ಅವರು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್ ಮುಂದೆ ಮನವಿ ಸಲ್ಲಿಸಲು ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಪಾಂಡೆ ಅವರು ಜಿಲ್ಲಾ ನ್ಯಾಯಾಧೀಶರ ಮೊರೆ ಹೋಗಿದ್ದರು ಎಂದು ಅಮರ್ ಉಜಾಲಾ ವರದಿ ತಿಳಿಸಿದೆ.