ರಾಜಕೀಯ ಪಕ್ಷಗಳು ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ತುಷ್ಟೀಕರಿಸುವುದರಿಂದಾಗಿ ದೇಶ ಕೋಮು ಗಲಭೆಗಳಿಗೆ ತುತ್ತಾಗುತ್ತಿದೆ ಎಂದಿರುವ ಬರೇಲಿಯ ಸೆಷನ್ಸ್ ನ್ಯಾಯಾಲಯ ಸಮರ್ಪಣೆ ಮತ್ತು ತ್ಯಾಗದಿಂದ ಅಧಿಕಾರ ನಡೆಸುತ್ತಿರುವ ಧಾರ್ಮಿಕ ವ್ಯಕ್ತಿಗೆ ಪರಿಪೂರ್ಣ ಉದಾಹರಣೆ ಎಂದರೆ ಅದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂಬುದಾಗಿ ಶ್ಲಾಘಿಸಿದೆ.
ಮುಸ್ಲಿಂ ಧರ್ಮಗುರು ಮೌಲಾನಾ ತೌಕೀರ್ ರಝಾಮ್ ಅವರಿಗೆ 2010ರ ಬರೇಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡುವ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಭಾರತದಲ್ಲಿನ ಗಲಭೆಗಳಿಗೆ ಮುಖ್ಯ ಕಾರಣವೆಂದರೆ ಇಲ್ಲಿನ ರಾಜಕೀಯ ಪಕ್ಷಗಳು ಒಂದು ನಿರ್ದಿಷ್ಟ ಧರ್ಮದ ತುಷ್ಟೀಕರಣದಲ್ಲಿ ತೊಡಗಿರುವುದು. ಇದರಿಂದಾಗಿ ಆ ನಿರ್ದಿಷ್ಟ ಧರ್ಮದ ಪ್ರಮುಖ ವ್ಯಕ್ತಿಗಳ ಸ್ಥೈರ್ಯ ತುಂಬಾ ಹೆಚ್ಚಿ ಗಲಭೆ ಇತ್ಯಾದಿಗಳನ್ನು ಮಾಡಿದರೂ, ಅಧಿಕಾರದ ಶ್ರೀರಕ್ಷೆ ಇರುವುದರಿಂದ ತಮ್ಮ ಒಂದು ಕೂದಲೂ ಕೊಂಕುವುದಿಲ್ಲ ಎಂದುಕೊಂಡಿದ್ದಾರೆ" ಎಂದು ಅವರು ಹೇಳಿದರು.
ಕೋಮು ಗಲಭೆಗಳ ಹಿಂದಿನ ಸೂತ್ರಧಾರ ಮೌಲ್ವಿ ಎಂದು ತೋರುತ್ತದೆ. ಪೊಲೀಸರ ಬೆಂಬಲದಿಂದಾಗಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿರಲಿಲ್ಲ ಎಂದು ಗಮನಿಸಿದ ನ್ಯಾಯಾಲಯ ಎಂದ ಮೌಲ್ವಿ ರಝಾಮ್ ಅವರು ಮಾರ್ಚ್ 11ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿತು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇಲ್ಲದಿದ್ದರೆ ರಝಾಮ್ ಅವರ ಇತ್ತೀಚಿನ ಭಾಷಣ ರಾಜ್ಯದಲ್ಲಿ ಮತ್ತೊಂದು ಗಲಭೆಗೆ ಕಾರಣವಾಗುತ್ತಿತ್ತು ಎಂದು ನ್ಯಾಯಾಧೀಶರು ಹೇಳಿದರು.
ದಾರ್ಶನಿಕರು ರಾಜರಾಗುವವರೆಗೂ ನಮ್ಮ ನಗರ ರಾಜ್ಯಗಳಲ್ಲಿ ದುಃಖಕ್ಕೆ ಅಂತ್ಯವಿಲ್ಲ ಎಂದು ತತ್ವಜ್ಞಾನಿ ಪ್ಲೇಟೊ ಹೇಳಿದ್ದನ್ನು ಪ್ರಸ್ತಾಪಿಸಿ ಯೋಗಿ ಆದಿತ್ಯನಾಥ್ ಅವರನ್ನು ನ್ಯಾಯಾಲಯ ಶ್ಲಾಘಿಸಿತು.
ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯದ ತುಷ್ಟೀಕರಣದಿಂದಾಗಿ ಭಾರತದಲ್ಲಿ ಗಲಭೆಗಳು ಉಂಟಾಗುತ್ತಿವೆ ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ, ಜನರಿಗೆ ನ್ಯಾಯ ಸಿಗಲು ವರ್ಷಗಳೇ ಹಿಡಿಯುತ್ತವೆ. ಇದರಿಂದಾಗಿ ತಾವು ನ್ಯಾಯಾಂಗದಿಂದ ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿಲ್ಲ ಎಂದು ಭಾವಿಸುವ ಗಲಭೆಕೋರರಿಗೆ ಗಲಭೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ದೊರೆಯುತ್ತದೆ ಎಂದು ಅದು ಹೇಳಿದೆ.
ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ತಾನು ಈ ಹಿಂದೆ ಹೊರಡಿಸಿದ ಕೆಲ ಆದೇಶಗಳಿಂದಾಗಿ, ಮುಸ್ಲಿಂ ಸಂಘಟನೆಯಿಂದ ಬೆದರಿಕೆಗಳು ಬಂದಿವೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕುಟುಂಬ ಭಯದ ವಾತಾವರಣದಲ್ಲಿ ಬದುಕುತ್ತಿದೆ ಎಂದ ಅವರು "ಜ್ಞಾನವಾಪಿ ಪ್ರಕರಣದಲ್ಲಿ ತೀರ್ಪು ನೀಡಿದಾಗಿನಿಂದ, ನಾನು ಪಾಪ ಮಾಡಿದ್ದೇನೆ ಎಂಬಂತೆ ನನ್ನ ಬಗ್ಗೆ ನಿರ್ದಿಷ್ಟ ಧರ್ಮದ ಜನ ಮತ್ತು ಅಧಿಕಾರಿಗಳು ವಿಚಿತ್ರವಾಗಿ ವರ್ತಿಸಿದ್ದಾರೆ. ಜ್ಞಾನವಾಪಿ ಪ್ರಕರಣದಲ್ಲಿ ಕಾನೂನಿಗೆ ಅನುಗುಣವಾಗಿ ನಾನು ತೀರ್ಪು ನೀಡಿದ್ದೇನೆ" ಎಂಬುದಾಗಿ ವಿವರಿಸಿದರು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]