ಉತ್ತರ ಪ್ರದೇಶದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಮತ್ತು ಕಾರ್ಯಾಚಟುವಟಿಕೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾಗಿ ನಿರ್ಲಕ್ಷ್ಯ ಧೋರಣೆ ತಾಳಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ಛೀಮಾರಿ ಹಾಕಿದೆ.
ತನ್ನ ಅಸಮರ್ಥತೆ ಮುಚ್ಚಿಕೊಳ್ಳಲು ಕುಂಟು ನೆಪ ಹೇಳುತ್ತಿರುವ ಉತ್ತರ ಪ್ರದೇಶದ ಸರ್ಕಾರಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ನೇತೃತ್ವದ ನ್ಯಾಯಮೂರ್ತಿಗಳಾದ ಪ್ರಿತಿಂಕರ್ ದಿವಾಕರ್, ನಹೀದ್ ಆರಾ ಮೂನಿಸ್, ಮನೋಜ್ ಮಿಶ್ರಾ, ಸುನೀತಾ ಅಗರ್ವಾಲ್, ಸೂರ್ಯ ಪ್ರಕಾಕ್ ಕೇಸರ್ವಾನಿ ಮತ್ತು ಮನೋಜ್ ಕುಮಾರ್ ಗುಪ್ತಾ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠವು ಛೀಮಾರಿ ಹಾಕಿದೆ.
“ಯಾವುದೇ ನಿರ್ಧಾರ ಕೈಗೊಳ್ಳದ ರಾಜ್ಯ ಸರ್ಕಾರವು ತನ್ನ ಅಸಮರ್ಥತೆ ಮುಚ್ಚಿಕೊಳ್ಳಲು ಕುಂಟು ನೆಪಗಳನ್ನು ಹೇಳುತ್ತಿದೆ. ಉತ್ತರ ಪ್ರದೇಶದಲ್ಲಿ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಕುರಿತು ರಾಜ್ಯದ ಅಧಿಕಾರಿಗಳು ಸ್ಪಂದಿಸುತ್ತಿರುವ ರೀತಿಗೆ ನಾವು ನಮ್ಮ ಅತೃಪ್ತಿಯನ್ನು ದಾಖಲಿಸುತ್ತಿದ್ದೇವೆ” ಎಂದು ಪೀಠವು ಹೇಳಿದೆ. “ಫೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮಕ್ಕಳಿಗೆ ವಿಶ್ರಾಂತಿ ಗೃಹ ಅಥವಾ ಶೌಚಾಲಯದ ವ್ಯವಸ್ಥೆ ಇಲ್ಲ” ಎಂದು ಇದೇ ವೇಳೆ ನ್ಯಾಯಾಲಯ ಕಿಡಿಕಾರಿದೆ.
ಉತ್ತರ ಪ್ರದೇಶದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯವನ್ನು ಕಲ್ಪಿಸುವ ಸಂಬಂಧ 2015ರಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. ನ್ಯಾಯಾಲಯದ ಕೊಠಡಿಗಳು, ಚೇಂಬರ್‌ಗಳು, ಪೂರಕ ಸೌಲಭ್ಯ ಮತ್ತು ನ್ಯಾಯಿಕ ಅಧಿಕಾರಿಗಳು ಮತ್ತು ನ್ಯಾಯಾಂಗದ ಅಧೀನ ಅಧಿಕಾರಿಗಳಿಗೆ ವಸತಿ ಲಭ್ಯತೆ ಕುರಿತಾದ ನೀಲನಕ್ಷೆಯನ್ನು ಸಲ್ಲಿಸುವಂತೆ 2019ರಲ್ಲಿ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
“ಪದೇಪದೇ ವಿಷಯದ ಕುರಿತು ನೆನಪಿಸಿದರೂ ಯಾವುದೇ ಸೂಕ್ತ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಕೈಗೊಂಡಿಲ್ಲ. ಸಾಕಷ್ಟು ಸಮಯ ಕಳೆದಿದ್ದರೂ ಹಲವು ಜಿಲ್ಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಭೂಮಿ ವಶಪಡಿಸಿಕೊಳ್ಳುವ ಕೆಲಸವೇ ನಡೆದಿಲ್ಲ” ಎಂದು ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ರಾಜ್ಯ ಸರ್ಕಾರ ಆರಂಭಿಸಿರುವ ವಿಶೇಷ ಪೋಕ್ಸೊ ನ್ಯಾಯಾಲಯಗಳು ಸಹ ಸಾಮಾನ್ಯ ನ್ಯಾಯಾಲಯದ ಕಟ್ಟಡದಲ್ಲೇ ಸಂತ್ರಸ್ತೆ ಮಕ್ಕಳಿಗೆ ಯಾವುದೇ ಸೌಲಭ್ಯವಿಲ್ಲದೇ ಕೆಲಸ ನಿರ್ವಹಿಸುವ ಸ್ಥಿತಿ ಇದೆ. ವಿಶೇಷ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮಕ್ಕಳಿಗೆ ವಿಶ್ರಾಂತಿ ಗೃಹ ಅಥವಾ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿಲ್ಲ” ಎಂದು ನ್ಯಾಯಾಲಯ ಒಂದು ಹಂತದಲ್ಲಿ ಸರ್ಕಾರದ ಸಂವೇದನಾಶೂನ್ಯತೆಯ ಬಗ್ಗೆ ಕಿಡಿಕಾರಿತು.
“ರಾಜ್ಯ ಸರ್ಕಾರ ಒಪ್ಪಿಕೊಂಡಿರುವಂತೆ ತುರ್ತಾಗಿ ಕ್ರಮಕೈಗೊಳ್ಳಬೇಕು” ಎಂದಿದ್ದು, ಅಡ್ವೊಕೇಟ್ ಜನರಲ್ ಭರವಸೆಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.