ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಗ್ರಾಹಕ ವೇದಿಕೆ, ಸಾಲ ವಸೂಲಾತಿ ನ್ಯಾಯಮಂಡಳಿ ಪ್ರಕರಣ ಕೂಡ ಇತ್ಯರ್ಥ: ನ್ಯಾ. ಬಿ ವೀರಪ್ಪ

ಬಿಬಿಎಂಪಿ ಜೊತೆ ಸಭೆ ನಡೆಸಿ ಆಸ್ತಿ ಖಾತೆ ವರ್ಗಾವಣೆ, ನೀರಿನ ಬಿಲ್‌, ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಬಿಲ್‌ಗೆ ಸಂಬಂಧಿಸಿದ ಬಾಕಿ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
KSLSA, Justice B Veerappa
KSLSA, Justice B Veerappa

ಇದೇ ಡಿಸೆಂಬರ್‌ 18ರಂದು ನಡೆಯುವ ಬೃಹತ್‌ ಲೋಕ್‌ ಅದಾಲತ್‌ನಲ್ಲಿ ಗ್ರಾಹಕರ ವೇದಿಕೆ, ಸಾಲ ವಸೂಲಾತಿ ನ್ಯಾಯಮಂಡಳಿ, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಕೂಡ ಈ ಬಾರಿಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಬಿ ವೀರಪ್ಪ ತಿಳಿಸಿದರು.

ಬೆಂಗಳೂರಿನ ಹೈಕೋರ್ಟ್‌ ಆವರಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬಂಧ ಕರ್ನಾಟಕ ಸರ್ಕಾರದ ಇನ್ಶೂರೆನ್ಸ್ ಕಂಪೆನಿ, ಎನ್‌ಎಲ್‌ಎಸ್‌ಐಯು, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಕೆಪಿಟಿಸಿಎಲ್‌, ಬೆಸ್ಕಾಂ, ಅಭಿಯೋಜನಾ ಇಲಾಖೆ, ಕಂದಾಯ ಇಲಾಖೆ, ಹಣಕಾಸು ಇಲಾಖೆ, ಕಾನೂನು ಕಾರ್ಯದರ್ಶಿಗಳು, ಸಂಪನ್ಮೂಲ ಇಲಾಖೆ, ನೀರಾವರಿ ನಿಗಮದ ಅಧಿಕಾರಿಗಳೊಡನೆ ಸತತವಾಗಿ ಸಭೆಗಳನ್ನು ಏರ್ಪಡಿಸಲಾಗಿದೆ. ಗ್ರಾಹಕರ ವೇದಿಕೆ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥಪಡಿಸುವುದಕ್ಕಾಗಿ ಪ್ರತಿ ಜಿಲ್ಲೆಯ ಗ್ರಾಹಕರ ವೇದಿಕೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವಿವರಿಸಿದರು.

ವರ್ಚುವಲ್‌ ಮತ್ತು ನೇರ ವಿಧಾನಗಳೆರಡರಲ್ಲೂ ಲೋಕ್‌ ಅದಾಲತ್‌ ನಡೆಯಲಿದ್ದು ಅದಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ಯೋಜನೆ ಕುರಿತ ಮಾಹಿತಿ

ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಆಸ್ತಿಗಳ ಖಾತಾ ವರ್ಗಾವಣೆ, ನೀರಿನ ಬಿಲ್‌ಗಳು, ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಬಿಲ್‌ಗಳು ಇತ್ಯಾದಿಗಳ ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕ್ ಅದಾಲತ್ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಇದಕ್ಕಾಗಿ ಬಿಬಿಎಂಪಿ ಬೆಂಗಳೂರು ಸಾರ್ವಜನಿಕ ಕುಂದುಕೊರತೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾನೂನು ಅರಿವು ಮೂಡಿಸಲು ಕೆಡೆಟ್‌ ಕಾರ್ಪ್ಸ್‌ಗಳನ್ನು ನೇಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಂಬತ್ತು ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ

ಈ ವರ್ಷ ಮಾರ್ಚ್‌, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆದ ಲೋಕ್‌ ಅದಾಲತ್‌ಗಳಲ್ಲಿ 9,40,173 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 25,42,60,21,555 ಮೊತ್ತವನ್ನು ಪಾವತಿಸಲಾಗಿದೆ. ರೂ 53,20,93,616ರಷ್ಟು ದಂಡ ವಸೂಲು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರೂ 3 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುತ್ತಿರುವ ಕುಟುಂಬಗಳಿಗೆ ಹಾಗೂ ಆದಾಯದ ಮಿತಿ ಲೆಕ್ಕಿಸದೆ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕು ಎಂದರು.

Related Stories

No stories found.
Kannada Bar & Bench
kannada.barandbench.com