ಯುಪಿಐ ಭಾರತದಲ್ಲಿ ಬದಲಾವಣೆ ತಂದಿದ್ದರೂ ಸೈಬರ್ ಅಪರಾಧದಿಂದ ಸುರಕ್ಷಿತವಲ್ಲ : ಕೇರಳ ಹೈಕೋರ್ಟ್

ಅನೇಕ ಉತ್ತಮ ಯೋಜನೆಗಳಂತೆ ಇಲ್ಲಿಯೂ ರಕ್ಷಣೆಗೆ ಸಂಬಂಧಿಸಿದಂತೆ ಲೋಪಗಳಿವೆ ಎಂದ ನ್ಯಾಯಾಲಯ.
Kerala High Court
Kerala High Court

ಸುಭಾರತದ ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಭದ್ರತೆಗೆ ಸಂಬಂಧಿಸಿದಂತೆ ಇರುವ ಕೆಲವು ಕಳವಳಗಳನ್ನು ಕೇರಳ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ [ಡಾ. ಸಜೀರ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].

ಯುಪಿಐ ಹಣದ ವಹಿವಾಟು ಬೀರಿರುವ ಧನಾತ್ಮಕ ಪ್ರಭಾವವನ್ನು ಒಪ್ಪಿದ ನ್ಯಾ. ದೇವನ್‌ ರಾಮಚಂದ್ರನ್‌ ಅವರು “ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಭಾರತದ ಹಣಕಾಸು ವಲಯವನ್ನು ಅದರಲ್ಲಿಯೂ ಜನರು ಹಣದ ವಹಿವಾಟು ನಡೆಸುವ ವಿಧಾನವನ್ನು ಬದಲಿಸಿದೆ. ಬಳಕೆಗೆ ಸುಲಭವಾದ ವ್ಯವಸ್ಥೆ ಮತ್ತು ಭದ್ರತಾ ವೈಶಿಷ್ಟಗಳಿಂದಾಗಿ ಲಕ್ಷಾಂತರ ಭಾರತೀಯರಿಗೆ ಆದ್ಯತೆಯ ಪಾವತಿ ವಿಧಾನವಾಗಿದ್ದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪಾವತಿ ವ್ಯವಸ್ಥೆಯಾಗಿದೆ” ಎಂದಿದ್ದಾರೆ.

ಆದಾಗ್ಯೂ ಈ ವ್ಯವಸ್ಥೆಯಲ್ಲಿ ಭದ್ತತಾ ಸಮಸ್ಯೆಗಳಿವೆ ಎಂದ ನ್ಯಾಯಾಲಯ ಜನರು ವ್ಯವಸ್ಥೆ ಮೇಲೆ ನಂಬಿಕೆ ಉಳಿಸಿಕೊಳ್ಳುವಂತಾಗಲು ಸುರಕ್ಷತೆಯನ್ನು ಜಾರಿಗೆ ತರಬೇಕು ಎಂದರು.

ಅನೇಕ ಉತ್ತಮ ಯೋಜನೆಗಳಂತೆ (ಇಲ್ಲಿಯೂ) ರಕ್ಷಣೆಗೆ ಸಂಬಂಧಿಸಿದಂತೆ ಲೋಪಗಳಿವೆ. ವಂಚಕರು ಸೈಬರ್ ಅಪರಾಧ ಎಸಗಿ, ಅನೇಕ ಖಾತೆಗಳ ಸಂಕೀರ್ಣ ಜಾಲದ ಮೂಲದ ಅಕ್ರಮವಾಗಿ ಕದ್ದ ಸಂಪತ್ತನ್ನು ಸ್ಥಳಾಂತರಿಸಿ ಸಂಗ್ರಹಿಸುತ್ತಾರೆ. ಆದ್ದರಿಂದ ವಿಶೇಷವಾಗಿ ದೇಶದ ಪ್ರಮುಖ ಯೋಜನೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಯುಪಿಐ ವ್ಯವಸ್ಥೆಯಲ್ಲಿ ಜನ ನಂಬಿಕೆ ಕಳೆದುಕೊಳ್ಳದಂತಾಗಲು ಕೆಲ ರಕ್ಷಣಾ  ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.

ತಮ್ಮ ಬ್ಯಾಂಕ್‌ ಖಾತೆ ಸ್ಥಗಿತಗೊಂಡಿರುವುದನ್ನು ಪ್ರಶ್ನಿಸಿ ಕೆಲ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸೈಬರ್‌ ಅಪರಾಧಿಯೊಬ್ಬರು ಯುಪಿಐ ಮೂಲಕ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದನ್ನು ಪತ್ತೆ ಹೆಚ್ಚಿದ್ದ ಪೊಲೀಸ್‌ ಅಧಿಕಾರಿಗಳು ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದ್ದರು.

ಆದರೆ ತಮ್ಮದಲ್ಲದ ತಪ್ಪಿಗೆ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದರಿಂದ ತಮ್ಮ ವಹಿವಾಟಿಗೆ ವ್ಯಾಪಕ ನಷ್ಟ ಉಂಟಾಗಿದೆ.  ಯುಪಿಐ ವ್ಯವಸ್ಥೆಯಲ್ಲಿ ವಣಿಕ ಸಮುದಾಯ ಇರಿಸಿರುವ ನಂಬಿಕೆ ಅಲುಗಾಡುವಂತಾಗಿದೆ ಹೀಗಾಗಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ರಾಷ್ಟ್ರೀಯ ಸೈಬರ್ ಕ್ರೈಮ್ಸ್ ಪೋರ್ಟಲ್‌ನಲ್ಲಿ (ಎನ್‌ಸಿಸಿಪಿ) ದೂರು ದಾಖಲಿಸಿದಾಗ ಅದಕ್ಕೆ ತಕ್ಷಣವೇ ಪೊಲೀಸರು ಪ್ರತಿಕ್ರಿಯೆ ನೀಡುತ್ತಾರೆ. ರಾಜ್ಯ ಪೊಲೀಸರೇ ಈ ಆದೇಶವನ್ನು ಹೊರಡಿಸಿದ್ದು, ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳು ವಿವಿಧ ಖಾತೆಗಳ ಮೂಲಕ ಸಾಗಿಸುವ ಮೊತ್ತವನ್ನು ಪತ್ತೆಹಚ್ಚಲು ಇಂತಹ ಆದೇಶಗಳು ಅಗತ್ಯವೆಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು.

ಆದರೂ, ಇಡಿಯಾಗಿ ಬ್ಯಾಂಕ್ ಖಾತೆಯನ್ನೇ  ಏಕೆ ಸ್ಥಗಿತಗೊಳಿಸಬೇಕು ಎಂದು ತನಗೆ ಅರ್ಥವಾಗುತ್ತಿಲ್ಲ. ವಿವಾದಿತ ಹಣದ ಮೊತ್ತ ಅರ್ಜಿದಾರರ ಖಾತೆಗಳಿಗೆ ಜಮೆಯಾಗಿದ್ದರೂ ಅವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆ ಬಹಿರಂಗಪಡಿಸದ ಹೊರತು ಅವರನ್ನು ಆರೋಪಿಗಳಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಆದ್ದರಿಂದ ಪೊಲೀಸರು ನೀಡಿರುವ ಆದೇಶದಲ್ಲಿ ನಮೂದಿಸಿರುವ ಮೊತ್ತಕ್ಕೆ ಮಾತ್ರ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಅರ್ಜಿದಾರರ ಖಾತೆಗಳಿರುವ ಬ್ಯಾಂಕ್‌ಗಳಿಗೆ ನ್ಯಾಯಾಲಯ ಆದೇಶಿಸಿತು. ಅರ್ಜಿದಾರರ ಖಾತೆಗಳನ್ನು ಸ್ಥಗಿತಗೊಳಿಸಬೇಕೇ ಮತ್ತು ಎಷ್ಟು ಸಮಯದವರೆಗೆ ಸ್ಥಗಿತಗೊಳಿಸಬೇಕು ಎಂಬ ಬಗ್ಗೆ ಬ್ಯಾಂಕ್‌ಗಳಿಗೆ ತಿಳಿಸುವಂತೆ ಪೊಲೀಸರಿಗೆ  ಅದು ಸೂಚಿಸಿದೆ . ಹಾಗೆ ಮಾಡದಿದ್ದರೆ, ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಮುಕ್ತರಾಗಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com