ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಬ್ರೈಲ್‌ ಪಠ್ಯ ಪುಸ್ತಕ ಅಪ್‌ಲೋಡ್‌ ಮಾಡಲು ಹೈಕೋರ್ಟ್‌ ಆದೇಶ

ರಾಜ್ಯದಲ್ಲಿ ಓದುತ್ತಿರುವ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಬ್ರೈಲ್ ಮಾದರಿ ಪಠ್ಯ ಪುಸ್ತಕ ಒದಗಿಸಬೇಕು. ಈ ವಿಚಾರದಲ್ಲಿ ಬೇರೆ ರಾಜ್ಯ, ವಿದೇಶಗಳಲ್ಲಿಯೂ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದ ಪೀಠ.
Karnataka HC and Visually impaired students
Karnataka HC and Visually impaired students

ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲದೆ ಖಾಸಗಿ ಶಾಲೆಯಲ್ಲಿ ಓದುತ್ತಿರುವ ದೃಷ್ಟಿದೋಷ ಇರುವ ವಿದ್ಯಾರ್ಥಿಗಳನ್ನು ಗುರುತಿಸಲು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುವುದು ಹಾಗೂ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಬ್ರೈಲ್ ಪಠ್ಯ ಪುಸ್ತಕಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಕುರಿತು ನಾಲ್ಕು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

"ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ಎಷ್ಟು ಮಂದಿ ದೃಷ್ಟಿದೋಷ ಇರುವ ವಿದ್ಯಾರ್ಥಿಗಳು ಇದ್ದಾರೆ? ದೃಷ್ಟಿದೋಷವಿರುವ ವಿದ್ಯಾರ್ಥಿಗಳಿಗಾಗಿ ಮೀಸಲಿರುವ ಶಾಲೆಗಳಿಗೆ ಮಾತ್ರ ಬ್ರೈಲ್ ರೂಪದಲ್ಲಿ ಪಠ್ಯ ಪುಸ್ತಕವನ್ನು ಸರ್ಕಾರ ಪೂರೈಸುತ್ತಿದೆ. ಇತರೆ ಸಾಮಾನ್ಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಪೂರೈಸುತ್ತಿಲ್ಲವೇ? ಅವರಿಗೆ ಪಠ್ಯ ಪುಸ್ತಕ ಪೂರೈಸುವ ಉದ್ದೇಶ ಸರ್ಕಾರಕ್ಕೆ ಇದೆಯೇ?" ಎಂದು ಪ್ರಶ್ನಿಸಿತು.

“ಸರ್ಕಾರಿ ಶಾಲೆಯಲ್ಲದೆ ಇತರೆ ಶಾಲೆಗಳಲ್ಲಿ ಎಷ್ಟು ಅಂಧ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂಬುದನ್ನು ಸರ್ಕಾರ ಗುರುತಿಸಿದೆಯೇ? ಎಷ್ಟು ಪುಸ್ತಕಗಳು ಅಗತ್ಯವಿದೆ? ಅದಕ್ಕೆ ಏನೆಲ್ಲಾ ಮಾಡಬೇಕು. ಈ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ನಂತರ ರಾಜ್ಯದಲ್ಲಿ ಓದುತ್ತಿರುವ ಎಲ್ಲಾ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಮಾದರಿಯ ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಈ ವಿಚಾರದಲ್ಲಿ ಬೇರೆ ರಾಜ್ಯಗಳಲ್ಲದೇ ವಿದೇಶಗಳಲ್ಲಿಯೂ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಪರಿಶೀಲಿಸಬೇಕು” ಎಂದು ಪೀಠವು ಸೂಚಿಸಿತು.

Also Read
ಅಂಧ ವಿದ್ಯಾರ್ಥಿಗಳಿಗೆ 15 ದಿನಗಳೊಳಗೆ ಬ್ರೈಲ್‌ ಲಿಪಿಯಲ್ಲಿ ಪಠ್ಯಪುಸ್ತಕ ಪೂರೈಸಿ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ವರ್ಷಾ ಐಯ್ಯಂಗಾರ್‌ ಅವರು “ರಾಜ್ಯದಲ್ಲಿನ ದೃಷ್ಟಿದೋಷ ಹಾಗೂ ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಡಿಜಿಟಲ್ ರೂಪದಲ್ಲಿ ಬ್ರೈಲ್ ಮಾದರಿಯ ಪಠ್ಯ ಪುಸ್ತಕಗಳನ್ನು ಸರ್ಕಾರ ಇನ್ನೂ ಒದಗಿಸಿಲ್ಲ” ಎಂದು ಪೀಠದ ಗಮನಸೆಳೆದರು.

ಸರ್ಕಾರಿ ವಕೀಲೆ ವಾಣಿ ಎಚ್‌ ಅವರು “ಬ್ರೈಲ್ ಲಿಪಿಯ ಪಠ್ಯ ಪುಸ್ತಕಗಳನ್ನು ಸರ್ಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು” ಎಂದು ಕೇಳಿದರು.

Related Stories

No stories found.
Kannada Bar & Bench
kannada.barandbench.com