ವೆಬ್‌ನಲ್ಲಿ ಆದೇಶ ಅಪ್‌ಲೋಡ್‌ ಮಾಡಿ, ಮುಂದೂಡಿಕೆಗೆ ಕಾರಣ ನೀಡಿ: ಅರೆ ನ್ಯಾಯಿಕ ಪ್ರಾಧಿಕಾರಗಳಿಗೆ ಹೈಕೋರ್ಟ್ ಸೂಚನೆ

“ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹೈಬ್ರಿಡ್‌ ವಿಧಾನಕ್ಕೆ ತೆರೆದುಕೊಂಡಿವೆ. ಜನರಿಗೆ ಸುಲಭವಾಗಿ ನ್ಯಾಯದಾನ ಮಾಡಲು ಎಲ್ಲಾ ಅರೆ ನ್ಯಾಯಿಕ ಪ್ರಾಧಿಕಾರಗಳಲ್ಲಿ ಅಂಥದ್ದೇ ವಿಧಾನ ಲಭ್ಯವಾಗಿಸುವ ಸಾಧ್ಯತೆ ಪರಿಶೀಲಿಸಬೇಕು” ಎಂದಿರುವ ಪೀಠ.
Justice Suraj Govindraj
Justice Suraj Govindraj

ಅರೆ ನ್ಯಾಯಿಕ ಪ್ರಾಧಿಕಾರಿಗಳ ಕಾರ್ಯನಿರ್ವಹಣೆ ಹೆಚ್ಚಿಸುವ ನಿಟ್ಟಿನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹೈಬ್ರಿಡ್‌ ವಿಚಾರಣೆಗೆ ಅವಕಾಶ ಮಾಡಿಕೊಡುವುದು ಸೇರಿದಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ [ಮಂಜೇಗೌಡ ವರ್ಸಸ್‌ ಕರ್ನಾಟಕ ರಾಜ್ಯ].

ಮಂಡ್ಯ ಜಿಲ್ಲಾ ಪಂಚಾಯಿತಿ ಮತ್ತು ನಾಗಮಂಗಲ ತಾಲ್ಲೂಕು ಪಂಚಾಯಿತಿಯ ಆಕ್ಷೇಪಾರ್ಹ ಆದೇಶಗಳನ್ನು ಪ್ರಶ್ನಿಸಿ ನಾಗಮಂಗಲ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಮಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಇದೇ ಸಂದರ್ಭದಲ್ಲಿ ಮೇಲ್ವಿಚಾರಣಾಧಿಕಾರಿಯು ಇತರೆ ಆಡಳಿತಾತ್ಮಕ ಕಾರ್ಯದಲ್ಲಿ ತೊಡಗಿರುವುದರಿಂದ ನೂರಕ್ಕೂ ಹೆಚ್ಚು ಬಾರಿ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದೆ ಎಂಬುದಕ್ಕೆ ಪೀಠವು ತೀವ್ರ ಬೇಸರ ವ್ಯಕ್ತಪಡಿಸಿತು. ವೆಬ್‌ಸೈಟ್‌ನಲ್ಲಿ ಆದೇಶಗಳನ್ನು ಅಪ್‌ಲೋಡ್‌ ಮಾಡುವುದು, ವಿಚಾರಣೆ ಮುಂದೂಡಿಕೆಗೆ ಕಾರಣ ನೀಡುವುದು, ಹೈಬ್ರಿಡ್‌ ವಿಚಾರಣೆಯ ಸಾಧ್ಯತೆಯ ಕುರಿತು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದೆ.

“ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹೈಬ್ರಿಡ್‌ ವಿಧಾನಕ್ಕೆ ತೆರೆದುಕೊಂಡಿವೆ. ಈ ನೆಲೆಯಲ್ಲಿ ದೇಶದ ಜನರಿಗೆ ಸುಲಭವಾಗಿ ನ್ಯಾಯದಾನ ಮಾಡಲು ಎಲ್ಲಾ ಅರೆ ನ್ಯಾಯಿಕ ಪ್ರಾಧಿಕಾರಗಳಲ್ಲಿ ಅಂಥದ್ದೇ ವಿಧಾನ ಲಭ್ಯವಾಗಿಸುವ ಸಾಧ್ಯತೆಯನ್ನು ಪ್ರಧಾನ ಕಾರ್ಯದರ್ಶಿ ಪರಿಶೀಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

“ಆಡಳಿತಾತ್ಮಕ ಪ್ರಾಧಿಕಾರಗಳು ಅರೆ ನ್ಯಾಯಿಕ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನಲ್ಲದೇ ಹೋದರೂ ಸರಿಸಮನಾದ ಪ್ರಾಮುಖ್ಯತೆಯನ್ನು ನೀಡಬೇಕಾದ ಅಗತ್ಯವಿದೆ. ವ್ಯಾಪ್ತಿ ಮೀರಿ, ಜನರಿಗೆ ಮಾಹಿತಿ ನೀಡದೇ ಆದೇಶ ಮಾಡಿದರೆ ಹಾಲಿ ಪ್ರಕರಣದಲ್ಲಿ ಆಗಿರುವಂತೆ ಜನರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ” ಎಂದು ನ್ಯಾಯಾಲಯವು ಹೇಳಿದೆ.

“ಎಲ್ಲಾ ನ್ಯಾಯಿಕ ಪ್ರಕ್ರಿಯೆಗಳನ್ನು ವೆಬ್‌ ಹೋಸ್ಟ್‌ ಮಾಡುವ ವ್ಯವಸ್ಥೆ ಮತ್ತು ವಿಧಾನ ರೂಪಿಸುವಂತೆ ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿಗೆ ಪೀಠವು ನಿರ್ದೇಶಿಸಿದೆ. “ಸಂಬಂಧಿತ ವೆಬ್‌ಸೈಟ್‌ನಲ್ಲಿ ಎಲ್ಲಾ ಪ್ರಕ್ರಿಯೆಯ ವಿವರಣೆಯನ್ನು ಅಪ್‌ಲೋಡ್‌ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.

“ವಿಚಾರಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ಮೇಲ್ವಿಚಾರಣಾಧಿಕಾರಿಯು ಆಡಳಿತಾತ್ಮಕ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂಬ ಚುಟುಕು ಹೇಳಿಕೆಗೆ ಬದಲಾಗಿ ವಿಸ್ತೃತವಾದ ಕಾರಣಗಳನ್ನು ನೀಡಬೇಕು” ಎಂದು ನ್ಯಾಯಾಲಯ ಹೇಳಿದೆ. ಇದಕ್ಕಾಗಿ ಸೂಕ್ತವಾದ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದೂ ಒತ್ತಿ ಹೇಳಿದೆ.

ಅರೆ ನ್ಯಾಯಿಕ ಕಾರ್ಯನಿರ್ವಹಣೆ ಮಾಡಲು ಆಡಳಿತಾತ್ಮಕ ಕಾರ್ಯನಿರ್ವಹಣೆ ಮಾಡಲು ಅಗತ್ಯವಿಲ್ಲದ ಅಧಿಕಾರಿಗಳನ್ನು ನೇಮಕ ಮಾಡುವ ಕುರಿತಾದ ಸಾಧ್ಯತೆಯನ್ನು ಪತ್ತೆ ಹಚ್ಚಲು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಹಲವು ಕಡೆ ಕಂದಾಯ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಅರೆನ್ಯಾಯಿಕ ಪ್ರಾಧಿಕಾರಗಳು ಸೂಕ್ತವಾದ ರೀತಿಯಲ್ಲಿ ವಿಚಾರಣೆ ನಡೆಸುತ್ತಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ನ್ಯಾಯಾಲಯ ಹೇಳಿದೆ.  ಈ ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಗೆ ಅಧಿಕಾರ ಇಲ್ಲ ಎಂದು ಅದರ ಆದೇಶವನ್ನು ಬದಿಗೆ ಸರಿಸಲಾಗಿದ್ದು, ಅರೆ ನ್ಯಾಯಿಕ ಕಾರ್ಯನಿರ್ವಹಿಸುವ ಆಡಳಿತಾತ್ಮಕ ಪ್ರಾಧಿಕಾರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಹಲವು ನಿರ್ದೇಶನಗಳನ್ನು ನ್ಯಾಯಾಲಯವು ನೀಡಿದೆ.

Related Stories

No stories found.
Kannada Bar & Bench
kannada.barandbench.com