ನ್ಯಾಯಿಕ ಪರಿಶೀಲನೆಯ ಸೋಗಿನಲ್ಲಿ ನ್ಯಾಯಾಲಯಗಳು ಸರ್ಕಾರ ನಡೆಸುವಂತಾಗಬಾರದು: ಕರ್ನಾಟಕ ಹೈಕೋರ್ಟ್‌

ತಜ್ಞರ ಅಭಿಪ್ರಾಯ ಆಧರಿಸಿ ಸರ್ಕಾರವು ರೂಪಿಸಿದ ನೀತಿಯ ಅನ್ವಯ ಕ್ರಮಕೈಗೊಂಡಾಗ ನ್ಯಾಯಾಲಯವು ಅತ್ಯುನ್ನತ ಹಣಕಾಸು ತಜ್ಞರ ರೀತಿ ವರ್ತಿಸಬಾರದು. ಅಲ್ಲದೇ, ಮಧ್ಯಪ್ರವೇಶವು ಸೀಮಿತವಾಗಿರಬೇಕು ಎಂದು ಹೇಳಿದ ಪೀಠ.
Justice Krishna S Dixit and Justice P Krishna Bhat
Justice Krishna S Dixit and Justice P Krishna Bhat

ಉತ್ತರ ಕರ್ನಾಟಕ ಜನರ ಹಿತ ದೃಷ್ಟಿಯಿಂದ ಕೃಷ್ಣ ಮೇಲ್ದಂಡೆ ಯೋಜನೆ (ಯುಕೆಪಿ) ಜಾರಿಗಾಗಿ ಭೂಮಿ ವಶಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

ಪ್ರವಾಹದಿಂದ ನಿರಾಶ್ರಿತರಾಗುವ ಜನರಿಗೆ ಪುನರ್ವಸತಿ ಕಲ್ಪಿಸಲು ಟೌನ್‌ಶಿಪ್‌ ನಿರ್ಮಿಸುವುದರ ಸಂಬಂಧ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಗೋಪಾಲ್‌ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಪಿ ಕೃಷ್ಣ ಭಟ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ತೀಚೆಗೆ ವಿಚಾರಣೆ ನಡೆಸಿತು.

ತಜ್ಞರ ಅಭಿಪ್ರಾಯ ಆಧರಿಸಿ ಸರ್ಕಾರವು ರೂಪಿಸಿದ ನೀತಿಯ ಅನ್ವಯ ಕ್ರಮಕೈಗೊಂಡಾಗ ನ್ಯಾಯಾಲಯವು ಉನ್ನತ ಹಣಕಾಸು ತಜ್ಞರ ರೀತಿ ವರ್ತಿಸಬಾರದು. ಅಲ್ಲದೇ, ಮಧ್ಯಪ್ರವೇಶವು ಸೀಮಿತವಾಗಿರಬೇಕು ಎಂದು ಪೀಠ ಹೇಳಿದೆ.

“ಆಡಳಿತ ನಡೆಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದ್ದು, ನ್ಯಾಯಿಕ ಪರಿಶೀಲನೆಯ ಸೋಗಿನಲ್ಲಿ ನ್ಯಾಯಾಲಯಗಳು ಸರ್ಕಾರ ನಡೆಸುವಂತಾಗಬಾರದು. ಹೇಳಿಕೆ-ಕೇಳಿಕೆಗಳಿಂದ ಮಾತ್ರದಿಂದಲೇ ಸರ್ಕಾರದ ಕಾರ್ಯವೈಖರಿಯಲ್ಲಿ ಕೆಡುಕನ್ನು ಕಾಣುವುದಾದರೆ ಆಡಳಿತವನ್ನು ನಡೆಸುವುದು ಕಷ್ಟ ಸಾಧ್ಯವಾಗುತ್ತದೆ. ಜನರಿಗೆ ಜವಾಬ್ದಾರರಾಗಿರಬೇಕಾದ ಚುನಾಯಿತ ಸರ್ಕಾರಗಳು ಸಾರ್ವಜನಿಕ ಒಳಿತಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇದು ತೊಡಕುಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ತೀವ್ರ ಬರದಿಂದ ಉತ್ತರ ಕರ್ನಾಟಕದಲ್ಲಿ ಇದ್ದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯುಕೆಪಿ ರೂಪಿಸಲಾಗಿದೆ. 2010ರಲ್ಲಿ ಕೃಷ್ಣ ಜಲ ವಿವಾದ ನ್ಯಾಯಮಂಡಳಿಯು ಆಲಮಟ್ಟಿ ಜಲಾಶಯದ ಮಟ್ಟ ಹೆಚ್ಚಿಸಲು ಸಲಹೆ ನೀಡಿತ್ತು. ಇದರಿಂದ ಉತ್ತರ ಕರ್ನಾಟಕ ಭಾಗದ ವ್ಯಾಪಕ ಭೂಮಿ ಮುಳುಗಡೆಯಾಗಲಿದೆ ಎಂದು ಹೇಳಿತ್ತು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಮೊದಲಿಗೆ ಸರ್ಕಾರದ ಅಧಿಸೂಚನೆಯನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಲಾಗಿತ್ತು. ಆನಂತರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸಾರ್ವಜನಿಕರ ಉದ್ದೇಶಕ್ಕಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿಲ್ಲ ಎಂದು ಮೇಲ್ಮನವಿದಾರರು ಪ್ರಶ್ನಿಸಿದ್ದರು.

ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಅಧಿಸೂಚನೆ ಘೋಷಣೆಯು ಅಂತಿಮವಾಗಿದ್ದು, ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಇದಕ್ಕೆ ಬಣ್ಣಕಟ್ಟುವ ಅಥವಾ ವಂಚಿಸುವ ಕೆಲಸವನ್ನು ಸಾಂವಿಧಾನಿಕ ನ್ಯಾಯಾಲಯದ ಮುಂದೆ ಎಸಗಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಭೂ ಸ್ವಾಧೀನವು ಬಣ್ಣಕಟ್ಟುವ ಅಧಿಕಾರಸ್ಥರ ಪ್ರಯತ್ನವಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ. ಆದ್ದರಿಂದ ಇದು ಕಾನೂನುಬಾಹಿರವಾಗಿದೆ ಎನ್ನಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಜನರ ಸಾಂವಿಧಾನಿಕ ಹಕ್ಕು ಉಲ್ಲಂಘನೆಯಾಗಿದೆ ಎಂದು ತೋರಿಸಿದಾಗ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದಿರುವ ನ್ಯಾಯಾಲಯವು ಮೇಲ್ಮನವಿಯನ್ನು ವಜಾ ಮಾಡಿದೆ.

ಹಿರಿಯ ವಕೀಲರಾದ ಅಶೋಕ್‌ ಹಾರನಹಳ್ಳಿ, ವಕೀಲರಾದ ಬಸವರಾಜ ಗೋಡಚಿ ಮತ್ತು ಸಿ ವಿ ಅಂಗಡಿ ಅವರು ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದರು. ಪ್ರತಿವಾದಿಗಳನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಟಿ ಕೆ ವಿದ್ಯಾವತಿ ಮತ್ತು ಹಿರಿಯ ವಕೀಲ ಜಿ ಕೆ ಹಿರೇಗೌಡರ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com