ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಯ್ಯದ್ ನಸ್ರುಲ್ಲಾ ಸೇರಿದಂತೆ ಚಿತ್ರದುರ್ಗ, ಬನ್ನೂರು ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆಗಳ ಇತರೆ ಚುನಾಯಿತಿ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಮೀಸಲು ನಿಗದಿಪಡಿಸಿ ಹೊರಡಿಸಿರುವ ಗೆಜೆಟ್ ಅಧಿಸೂಚನೆಯನ್ನು ಪೀಠಕ್ಕೆ ಸಲ್ಲಿಸಿದರು.
ಅಲ್ಲದೇ, ರಾಜ್ಯದ 117 ಪಟ್ಟಣ ಪಂಚಾಯಿತಿ, 123 ಪುರಸಭೆ ಮತ್ತು 61 ನಗರಸಭೆಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿವರಿಸಿದರು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಮೊಹಮ್ಮದ್ ತಾಹೀರ್, ಚುನಾವಣೆ ಸಮಯ ಮೀರಿ ವರ್ಷ ಕಳೆದರೂ ಮೀಸಲಾತಿ ಪ್ರಕಟ ಮಾಡಿರಲಿಲ್ಲ. ಇದೀಗ ಮೀಸಲು ಪ್ರಕಟಿಸಲಾಗಿದೆ. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಅಧಿಸೂಚನೆಯಲ್ಲಿ ತಿಳಿಸಿಲ್ಲ. ಈ ವಿಚಾರವನ್ನು ಸರ್ಕಾರ ಖಚಿತಪಡಿಸಬೇಕಿದೆ ಎಂದು ಪೀಠದ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಯಾವಾಗ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಆಗಸ್ಟ್ 9ರಂದು ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.