ಬೈಜೂಸ್ ಮಾತೃಸಂಸ್ಥೆಯಾದ ಬೆಂಗಳೂರಿನ ಥಿಂಕ್ & ಲರ್ನ್ ಕಂಪೆನಿಯು ತನ್ನ ಷೇರಿನ ಅಡಮಾನ, ಮಾರಾಟ ಅಥವಾ ವರ್ಗಾವಣೆ ಮಾಡದಂತೆ ನಿರ್ಬಂಧಿಸುವಂತೆ ವಿದೇಶಿ ಸಾಲದಾತ ಕಂಪೆನಿ ಗ್ಲಾಸ್ ಟ್ರಸ್ಟ್ ಎಲ್‌ಎಲ್‌ಸಿ ಈಚೆಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣದ ಮೆಟ್ಟಿಲೇರಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರು ಬೈಜೂಸ್‌ಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
1.2 ಬಿಲಿಯನ್ ಡಾಲರ್ ಅವಧಿ ಸಾಲ ನೀಡಲು ಅಮೆರಿಕಾದ ಬ್ಯಾಂಕೇತರ ಸಾಲ ಏಜೆನ್ಸಿಯಾದ ಗ್ಲಾಸ್ ಟ್ರಸ್ಟ್ ಅನ್ನು 100 ಸಾಲದಾತರು ಆಡಳಿತಾತ್ಮಕ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ.
ಬೈಜೂಸ್ ₹8,000 ಕೋಟಿ ಸಾಲವನ್ನು ಮರು ಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಗ್ಲಾಸ್ ಟ್ರಸ್ಟ್ ಎನ್‌ಸಿಎಲ್‌ಟಿ ಮೆಟ್ಟಿಲೇರಿದೆ.
ಖೈತಾನ್ & ಕಂಪೆನಿ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದು, 2022ರಿಂದ ಸಾಲ ಮರುಪಾವತಿ ನಿಂತಿದ್ದು, ಇದನ್ನು ಒಪ್ಪಿಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಗ್ಲಾಸ್ ಟ್ರಸ್ಟ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಬೈಜೂಸ್ ಮಾಲೀಕ ರವೀಂದ್ರ ಬೈಜು ಅವರು ತಮ್ಮ ಷೇರುಗಳಿಗೆ ಪ್ರತಿಯಾಗಿ ₹350 ಕೋಟಿ ಸಾಲ ಮಾಡಿದ್ದಾರೆ. ಅದಾಗ್ಯೂ, ಬೈಜು ದುಬೈನಲ್ಲಿ ನೆಲೆಸಿರುವುದರಿಂದ ಸಾಲದಾತರು ಯಾರನ್ನೂ ಹೊಣೆಯಾಗಿಸಿ ಮರಳಿ ಹಣ ಪಡೆಯದ ಸ್ಥಿತಿ ನಿರ್ಮಾಣವಾಗಿದೆ ಎಂದರು.
“ಬೆಂಗಳೂರಿನ ಎನ್‌ಸಿಎಲ್‌ಟಿಯಲ್ಲಿ ಬೈಜೂಸ್ ವಿರುದ್ಧ ಹಲವಾರು ದಿವಾಳಿ ಪ್ರಕ್ರಿಯೆ ಅರ್ಜಿಗಳು ಬಾಕಿರುವುದು ಕಂಪೆನಿಯ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆʼ ಎಂದು ಆಕ್ಷೇಪಿಸಿದರು.
ಬೈಜೂಸ್ ಪರವಾಗಿ ವಾದಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಸಾಲದಾತರ ಆರೋಪಗಳಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಬೇಕು. ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಲಾಗಿದ್ದು, ಪ್ರತಿಕ್ರಿಯಿಸಲು ಬೈಜೂಸ್‌ಗೆ ಅವಕಾಶ ನೀಡದೇ ಪರಿಹಾರ ಕೋರಲಾಗಿದೆ ಎಂದರು.
ಇದೇ ಸಂಬಂಧಿತ ಪ್ರಕರಣದಲ್ಲಿ ಇತರೆ ಸಾಲದಾತರಿಗೆ ಹಣ ಮರುಪಾವತಿ ಸಾಧ್ಯತೆ ಬಗ್ಗೆ ಪರಿಶೀಲಿಸಲು ಬೈಜೂಸ್‌ಕಾಲಾವಕಾಶ ಕೋರಿರುವುದನ್ನು ಇಲ್ಲಿ ನೆನೆಯಬಹುದು.
ಟೆಲಿಪರ್ಫಾಮೆನ್ಸ್ ಬ್ಯುಸಿನೆಸ್ ಸರ್ವೀಸಸ್ ಜೊತೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಬೈಜೂಸ್‌ಗೆ ಏಪ್ರಿಲ್‌ನಲ್ಲಿ ಕಾಲಾವಕಾಶ ನೀಡಲಾಗಿತ್ತು. ಸರ್ಫರ್ ಟೆಕ್ನಾಲಜೀಸ್ ಜೊತೆಗೂ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಬೈಜೂಸ್ ಪರ ವಕೀಲ ಪ್ರಮೋದ್ ನಾಯರ್ ತಿಳಿಸಿದ್ದರು.
ಉಭಯ ಕಂಪೆನಿಗಳ ಜೊತೆ ವಿವಾದ ಇತ್ಯರ್ಥಪಡಿಸಿಕೊಂಡು ಜಂಟಿ ಮೆಮೊ ಸಲ್ಲಿಸಲು ಬೈಜೂಸ್‌ಗೆ ಎನ್‌ಸಿಎಲ್‌ಟಿ ಜೂನ್ 26ರವರೆಗೆ ಕಾಲಾವಕಾಶ ನೀಡಿದೆ. ಇಲ್ಲವಾದಲ್ಲಿ ದಿವಾಳಿ ಪ್ರಕ್ರಿಯೆ ಅರ್ಜಿ ವಿಚಾರಣೆ ಮುಂದುವರಿಸುವುದಾಗಿ ನ್ಯಾಯಾಧಿಕರಣ ಹೇಳಿದೆ.