ಇಸ್ರೋ ಒಡೆತನದ ಅಂತರಿಕ್ಷ್ ವಿರುದ್ಧ 1.29 ಶತಕೋಟಿ ಡಾಲರ್ ಮೊಕದ್ದಮೆ ಮುಂದುವರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಅನುಮತಿ

ವ್ಯಾಜ್ಯ 2005ರ ಉಪಗ್ರಹ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದೆ. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆಯಲ್ಲಿ ಭಾರತದ ಪರಿಷ್ಕೃತ ನೀತಿ ಉಲ್ಲೇಖಿಸಿ ದೇವಾಸ್‌ ಜೊತೆಗಿನ ಒಪ್ಪಂದವನ್ನು ಅಂತರಿಕ್ಷ್ 2011ರಲ್ಲಿ ರದ್ದುಗೊಳಿಸಿತ್ತು.
US Supreme Court
US Supreme Court
Published on

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಡೆತನದ ಅಂತರಿಕ್ಷ್‌ ಕಾರ್ಪೊರೇಷನ್ ವಿರುದ್ಧ 1.29 ಶತಕೋಟಿ ಡಾಲರ್ ಮೊತ್ತದ ಮಧ್ಯಸ್ಥಿಕೆ ತೀರ್ಪನ್ನು ಜಾರಿಗೊಳಿಸುವಂತೆ ಕೋರಿ ತಾನು ಹೂಡಿರುವ ಮೊಕದ್ದಮೆಯನ್ನು ಮಾರಿಷಸ್ ಮೂಲದ  ದೇವಾಸ್ ಮತ್ತು ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಅಮೆರಿಕದ ನ್ಯಾಯಾಲಯಗಳಲ್ಲಿ ಮುಂದುವರೆಸಬಹುದು ಎಂದು ಅಮೆರಿಕದ ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ದೇವಾಸ್‌ ಮಾರಿಷಸ್‌ ಲಿಮಿಟೆ ಮತ್ತು ಅಂತರಿಕ್ಷ್‌ ಕಾರ್ಪೊರೇಷನ್‌ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ತೀರ್ಪು 2023ರಲ್ಲಿ ಅಮೆರಿಕದ ಒಂಬತ್ತನೇ ಸರ್ಕೀಟ್‌ ಕೋರ್ಟ್ ಆಫ್ ಅಪೀಲ್ಸ್‌ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.  ಸರ್ಕಾರಿ ಸ್ವಾಮ್ಯದ ಭಾರತೀಯ ಕಂಪನಿಯಾದ ಅಂತರಿಕ್ಷ್‌, ವಿದೇಶಿ ಸಾರ್ವಭೌಮ ವಿನಾಯಿತಿ ಕಾಯಿದೆ ಅಡಿಯಲ್ಲಿ ಅಮೆರಿಕದೊಂದಿಗೆ ವೈಯಕ್ತಿಕ ನ್ಯಾಯವ್ಯಾಪ್ತಿಯಲ್ಲಿ ಸಾಕಷ್ಟು ಸಂಪರ್ಕ ಹೊಂದಿಲ್ಲ ಎಂಬ ಆಧಾರದ ಮೇಲೆ ಮೊಕದ್ದಮೆಯನ್ನು ಸರ್ಕೀಟ್‌ ಕೋರ್ಟ್ ಆಫ್ ಅಪೀಲ್ಸ್‌  ವಜಾಗೊಳಿಸಿತ್ತು. ಹೊರದೇಶಗಳು ಮತ್ತು ಅಮೆರಿಕ ನ್ಯಾಯಾಲಯಗಳಲ್ಲಿ ಅವುಗಳ ವಾಗ್ದಾನಗಳ ವಿರುದ್ಧದ ಮೊಕದ್ದಮೆಗಳನ್ನು ನಿಯಂತ್ರಿಸುವ ಕಾಯಿದೆಯಡಿ ಹಾಗೆ ತೋರಿಸುವ ಅಗತ್ಯವಿಲ್ಲ ಎಂದು ಅಮೆರಿಕ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

2005ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ವಿಭಾಗವಾದ ಅಂತರಿಕ್ಷ್‌ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ, ಎಸ್-ಬ್ಯಾಂಡ್ ತರಂಗಾಂತರ ಬಳಸಿಕೊಂಡು ಭಾರತದಾದ್ಯಂತ ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ನೀಡಲು ಸಾಧ್ಯವಾಗುವಂತೆ ಅಂತರಿಕ್ಷ್‌ ಎರಡು ಇಸ್ರೋ ಉಪಗ್ರಹಗಳ ಟ್ರಾನ್ಸ್‌ಪಾಂಡರ್‌ಗಳನ್ನು ದೇವಾಸ್‌ಗೆ ಗುತ್ತಿಗೆ ನೀಡಬೇಕಿತ್ತು.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮತ್ತು ಕಾರ್ಯತಂತ್ರದ ಕಾರಣಕ್ಕೆ ಎಸ್‌ ಬ್ಯಾಂಡ್‌ ತರಂಗಾಂತರವನ್ನು ಮೀಸಲಿರಿಸುವ ಅಗತ್ಯವಿದೆ ಎಂದ ಭಾರತ ಸರ್ಕಾರ ಏಕಪಕ್ಷೀಯವಾಗಿ ಒಪ್ಪಂದ ರದ್ದುಗೊಳಿಸಿತ್ತು. ಹೀಗಾಗಿ ದೇವಾಸ್‌ ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿ (ಐಸಿಸಿ) ಮುಂದೆ ಮಧ್ಯಸ್ಥಿಕೆ ಪ್ರಕ್ರಿಯೆ ಆರಂಭಿಸಿತ್ತು.

2015 ರಲ್ಲಿ, ಐಸಿಸಿ ನ್ಯಾಯಮಂಡಳಿ ದೇವಾಸ್‌ಗೆ $562.5 ಮಿಲಿಯನ್ ಪರಿಹಾರ ನೀಡಿತು. ಪ್ರತ್ಯೇಕ ಪ್ರಕರಣದಲ್ಲಿ, ದೇವಾಸ್‌ನಲ್ಲಿನ ವಿದೇಶಿ ಹೂಡಿಕೆದಾರರು ಭಾರತ ಸರ್ಕಾರದ ವಿರುದ್ಧ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ (ಬಿಐಟಿ) ಅಡಿಯಲ್ಲಿ ದಾವೆ ಹೂಡಿದರು, ಇದರ ಪರಿಣಾಮವಾಗಿ ಅವರ ಪರವಾಗಿ ಹೆಚ್ಚುವರಿ ಮಧ್ಯಸ್ಥಿಕೆ ತೀರ್ಪುಗಳು ದೊರೆತವು. 

ಆದರೆ,ಈ ಒಪ್ಪಂದ ಆರಂಭದಿಂದಲೂ ವಂಚನೆಯಿಂದ ಕೂಡಿದೆ ಎಂದು ಅಂತರಿಕ್ಷ್‌ ಮತ್ತು ಭಾರತ ಸರ್ಕಾರ ಪ್ರತಿಪಾದಿಸಿತು. 2021 ರಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ ) ದೇವಾಸ್ ಅನ್ನು ನಕಲಿ ಘಟಕ ಎಂದು ಕರೆದು ಅದರ ದಿವಾಳಿತನಕ್ಕೆ ಆದೇಶಿಸಿತು. ಭಾರತದ ಸುಪ್ರೀಂ ಕೋರ್ಟ್ 2022ರಲ್ಲಿ ತೀರ್ಪು ಎತ್ತಿಹಿಡಿದಿತು , ದೇವಾಸ್ ಅನ್ನು ವಂಚನೆಯ ಉದ್ದೇಶಕ್ಕಾಗಿ ಕಟ್ಟಲಾಗಿದ್ದು ಸಾರ್ವಜನಿಕ ಸಂಪನ್ಮೂಲಗಳನ್ನು ತಿರುಚಿದೆ ಎಂದು ತೀರ್ಪು ನೀಡಿತು.

2022ರಲ್ಲಿ, ದೆಹಲಿ ಹೈಕೋರ್ಟ್ ವಂಚನೆ, ಪೇಟೆಂಟ್ ಅಕ್ರಮ ಮತ್ತು ಭಾರತದ ಸಾರ್ವಜನಿಕ ನೀತಿಯೊಂದಿಗಿನ ಸಂಘರ್ಷದ ಆಧಾರದ ಮೇಲೆ ಐಸಿಸಿ ತೀರ್ಪನ್ನು ರದ್ದುಗೊಳಿಸಿತು . ದೇವಾಸ್-ಅಂತರಿಕ್ಷ್‌ ಒಪ್ಪಂದವನ್ನು "ಮೋಸದ ಉದ್ದೇಶದಿಂದ ಮಾಡಿಕೊಳ್ಳಲಾಗಿದೆ" ಮತ್ತು ತೀರ್ಪು ಜಾರಿಗೆ ಅವಕಾಶ ನೀಡುವುದು "ವಂಚನೆಯನ್ನು ಪ್ರೋತ್ಸಾಹಿಸುತ್ತದೆ, ಇದು ಭಾರತೀಯ ಕಾನೂನು ವ್ಯವಸ್ಥೆ ಸಹಿಸಲಾಗದ ವಿಷಯ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.

ಮತ್ತೊಂದೆಡೆ ಅಮೆರಿಕ ಸೇರಿದಂತೆ ಹಲವು ನ್ಯಾಯವ್ಯಾಪ್ತಿಗಳಲ್ಲಿ ಐಸಿಸಿ ತೀರ್ಪನ್ನು ಜಾರಿಗೊಳಿಸುವಂತೆ ದೇವಾಸ್ ಕೋರಿತು. ಜಿಲ್ಲಾ ನ್ಯಾಯಾಲಯ ಈ ತೀರ್ಪನ್ನು ಎತ್ತಿಹಿಡಿದರೆ, ಒಂಬತ್ತನೇ ಸರ್ಕೀಟ್‌ ನ್ಯಾಯಾಲಯ ನ್ಯಾಯವ್ಯಾಪ್ತಿಯ ಆಧಾರದ ಮೇಲೆ ಅದನ್ನು ರದ್ದುಗೊಳಿಸಿತು. ಈ ತೀರ್ಪನ್ನು ಇದೀಗ ಅಮೆರಿಕ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

[ತೀರ್ಪಿನ ಪ್ರತಿ]

Attachment
PDF
Devas_v__Antrix
Preview
Kannada Bar & Bench
kannada.barandbench.com