ಗರ್ಭಧಾರಣೆ ಕುರಿತ ಕೃತಿಯಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರ್ ಖಾನ್‌ಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಕರೀನಾ ಕಪೂರ್ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಕೀಲ ಕ್ರಿಸ್ಟೋಫರ್ ಆಂಥೋನಿ ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠ ನೋಟಿಸ್ ನೀಡಿತು.
Kareena Kapoor Khan with MP High Court Jabalpur
Kareena Kapoor Khan with MP High Court Jabalpur Kareena Kapoor Khan (Instagram)
Published on

ಗರ್ಭಾವಸ್ಥೆ ಕುರಿತ  ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್‌ ಎಂಬ ಪದ ಬಳಸಿದ್ದಕ್ಕಾಗಿ ಪ್ರಕರಣ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ಈಚೆಗೆ ನೋಟಿಸ್‌ ನೀಡಿದೆ [ಕ್ರಿಸ್ಟೋಫರ್ ಆಂಟನಿ ಮತ್ತು ಕರೀನಾ ಕಪೂರ್‌ ಖಾನ್‌ ನಡುವಣ ಪ್ರಕರಣ].

ಕರೀನಾ ಅವರ ವಿರುದ್ಧ ವಕೀಲ ಕ್ರಿಸ್ಟೋಫರ್ ಆಂಥೋನಿ ಅವರು ಪ್ರಕರಣ ದಾಖಲಿಸುವಂತೆ ಮಾಡಿದ್ದ ಮನವಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆಂಥೋನಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾ. ಗುರುಪಾಲ್‌ ಸಿಂಗ್‌ ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ಪೀಠ ನೋಟಿಸ್‌ ಜಾರಿಗೊಳಿಸಿತು. 

ʼಕರೀನಾ ಕಪೂರ್‌ ಖಾನ್ಸ್‌ ಪ್ರೆಗ್ನೆನ್ಸಿ ಬೈಬಲ್‌ʼ ಕೃತಿಯಲ್ಲಿ ಬೈಬಲ್‌ ಎಂಬ ಪದ ಬಳಸಿ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಕರೀನಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಕರೀನಾ ಅವರಲ್ಲದೆ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌, ಜಗ್ಗರ್‌ನಾಟ್‌ ಬುಕ್ಸ್‌ ಹಾಗೂ ಕೃತಿಯ ಸಹ ಲೇಖಕರನ್ನು ಕೂಡ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನಟಿಯ ಗರ್ಭಧಾರಣೆಯೊಂದಿಗೆ ಪವಿತ್ರ ಪಸ್ತಕ ಬೈಬಲನ್ನು ತುಲನೆ ಮಾಡಿರುವುದು ಕ್ರೈಸ್ತ ಸಮುದಾಯದ ಭಾವನೆಗಳಿಗೆ ನೋವುಂಟು ಮಡಿದೆ ಎಂದು ಆರೋಪಿಸಿ ಆಂಥೋನಿ ಅವರು ಈ ಹಿಂದೆ ಜಬಲ್‌ಪುರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ ಪರಿಹಾರ ಕೋರಿದ್ದರು.

'ಬೈಬಲ್' ಪದದ ಬಳಕೆ ಕ್ರೈಸ್ತ ಸಮುದಾಯದ ಭಾವನೆಗಳನ್ನು ಹೇಗೆ ನೋಯಿಸುತ್ತದೆ ಎಂಬುದನ್ನು ಸಾಬೀತುಪಡಿಸಲು ದೂರುದಾರರು ವಿಫಲರಾಗಿದ್ದಾರೆ ಎಂಬ ಕಾರಣಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೂಡ ಮನವಿ ತಿರಸ್ಕರಿಸಿತ್ತು. ಬಳಿಕ ಹೆಚ್ಚುವರಿ ನ್ಯಾಯಾಲಯ ಕೂಡ ಪರಿಹಾರ ನೀಡಲು ನಿರಾಕರಿಸಿದ್ದರಿಂದ ಆಂಥೋನಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಆಂಥೋನಿ ಪ್ರಕರಣದಲ್ಲಿ ಖುದ್ದು ಹಾಜರಿದ್ದರು. ದಿಲೀಪ್‌ ಪರಿಹಾರ್‌ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com