Justice Hemant Chandangoudar
Justice Hemant Chandangoudar

ಪೊಲೀಸರ ವಿರುದ್ಧ ಅಸಂಸದೀಯ ಪದ ಬಳಕೆ: ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಅರ್ಜಿದಾರರು ಪೊಲೀಸರ ಮೇಲೆ ಬಲ ಪ್ರಯೋಗ ಅಥವಾ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ. ಸರ್ಕಾರಿ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಬಲಪ್ರಯೋಗ ಮಾಡಿರಬೇಕು ಅಥವಾ ಹಲ್ಲೆ ನಡೆಸಿರಬೇಕು ಎಂದಿರುವ ನ್ಯಾಯಾಲಯ.

ಪೊಲೀಸರ ವಿರುದ್ಧ ಅಸಂಸದೀಯ ಪದ ಬಳಸುವುದಲ್ಲದೇ ಬಲ ಪ್ರಯೋಗ ಮಾಡಿ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ತಮ್ಮ ವಿರುದ್ಧ ಚನ್ನಪಟ್ಟಣ ಪೂರ್ವ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಚನ್ನಪಟ್ಟಣದ ನಿವಾಸಿಗಳಾದ ಸಯದ್‌ ಈಸ ಇಬ್ರಾಹಿಂ ಮತ್ತು ಸಯದ್‌ ಮುಜಾಹಿದ್‌ ಮೆಹ್ದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

2020ರಲ್ಲಿ ರಾತ್ರಿ 11.30ರ ನಂತರವೂ ಹೋಟೆಲ್‌ ತೆರೆದಿದ್ದ ಹಿನ್ನೆಲೆಯಲ್ಲಿ ಅದನ್ನು ನಡೆಸುತ್ತಿದ್ದ ಅರ್ಜಿದಾರರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ಆಗ ಅರ್ಜಿದಾರರು ಪೊಲೀಸರನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದರು. ಜೊತೆಗೆ, ಭೀಕರ ಪರಿಣಾಮ ಎದರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದರು. ಆ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಆ ಸಂಬಂಧ ಅರ್ಜಿದಾರರ ವಿರುದ್ಧ ಸರ್ಕಾರಿ ಆದೇಶ ಉಲ್ಲಂಘನೆ, ಸಂಯಮ ಮೀರಿದ, ಅಪರಾಧಿಕ ಬಲ ಬಳಸಿದ, ಅದರಿಂದ ಸರ್ಕಾರಿ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚನ್ನಪಟ್ಟಣ ಪೂರ್ವ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣವು ಚನ್ನಪಟ್ಟಣದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಅದನ್ನು ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿದಾರರು ಪೊಲೀಸರ ಮೇಲೆ ಯಾವುದೇ ಬಲ ಪ್ರಯೋಗ ಅಥವಾ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ. ಸರ್ಕಾರಿ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಬಲಪ್ರಯೋಗ ಮಾಡಿರಬೇಕು ಅಥವಾ ಹಲ್ಲೆ ನಡೆಸಿರಬೇಕು. ಈ ಕೃತ್ಯ ಎಸಗಿರುವ ಸಂಬಂಧ ಅರ್ಜಿದಾರರ ವಿರುದ್ಧ ಯಾವುದೇ ಆರೋಪವಿಲ್ಲ. ಹಲ್ಲೆ ಅಥವಾ ಬಲಪ್ರಯೋಗವನ್ನು ಬಳಸಿ ಸರ್ಕಾರಿ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಪೊಲೀಸ್ ಸಿಬ್ಬಂದಿ ನಿಂದಿಸಿ ಬೆದರಿಕೆ ಹಾಕಿರುವುದಷ್ಟೇ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

Attachment
PDF
Sayed Esa Ibrahim and other Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com