ಉತ್ರಾ ಕೊಲೆ: ಅಪರಾಧಿಯ ಶಿಕ್ಷೆಗೆ ಕಾರಣವಾದ ಕೃತಕ ಪ್ರಯೋಗ, ತಜ್ಞರ ಹಾಗೂ ಸಾಂಧರ್ಬಿಕ ಸಾಕ್ಷ್ಯಗಳ ಕುತೂಹಲಕಾರಿ ವಿವರ

ನೈಜ ಘಟನೆ ನಡೆದ ರೀತಿಯಲ್ಲಿಯೇ ಕೊಠಡಿಯೊಂದರಲ್ಲಿ ಸಂತ್ರಸ್ತೆಯ ದೇಹಾಕೃತಿ ಹೋಲುವ ಗೊಂಬೆಯನ್ನಿರಿಸಿ ಜೀವಂತ ನಾಗರ ಹಾವು ಕಚ್ಚುವ ರೀತಿಯ ವಿಭಿನ್ನ ಪ್ರಯೋಗವನ್ನು ಅಪರಾಧವನ್ನು ನಿರೂಪಿಸಲೆಂದೇ ನಡೆಸಲಾಗಿತ್ತು.
uthra murder case
uthra murder case

ತನ್ನ ವಿಕಲಚೇತನ ಪತ್ನಿ ಉತ್ರಾಳನ್ನು ನಾಗರಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ್ದ ಧನದಾಹಿ ಅಪರಾಧಿ ಪತಿ ಸೂರಜ್‌ಗೆ ಕೇರಳ ನ್ಯಾಯಾಲಯವು ₹5 ಲಕ್ಷ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿರುವ ಸುದ್ದಿ ವ್ಯಾಪಕವಾಗಿ ವರದಿಯಾಗಿದೆ. ಇದೇ ವೇಳೆ ಅಪರಾಧಿಯು ಪತ್ನಿಯನ್ನು ಕೊಲೆ ಮಾಡಲು ಮಾಡಿದ ಸಿನಿಮೀಯ ರೀತಿಯ ಯತ್ನ ಹಾಗೂ ಅದನ್ನು ನಿರೂಪಿಸಲು ಕೇರಳ ಪೊಲೀಸರು ಕೈಗೊಂಡ ವೃತ್ತಿಪರ ತನಿಖೆ ಮತ್ತು ಪ್ರಯೋಗಗಳು ಮಾಧ್ಯಮದ ಗಮನ ಸೆಳೆದಿವೆ.

ನಿದ್ರಾಹೀನಳಾಗಿದ್ದ ಪತ್ನಿ ಉತ್ರಾಳನ್ನು ಅಪರಾಧಿಯು ಜೀವಂತ ನಾಗರಹಾವಿನಿಂದ ಕಚ್ಚಿಸುವ ಮೂಲಕ ಕೊಲೆ ಮಾಡಿದ್ದ. ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಹಲವು ಪ್ರಕರಣಗಳು ದೇಶದಲ್ಲಿ ನಡೆದಿವೆ. ಆದರೆ, ಪ್ರಾಥಮಿಕವಾಗಿ ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಅಪರಾಧ ಎತ್ತಿ ಹಿಡಿದ ಮೊದಲ ಪ್ರಕರಣ ಇದಾಗಿದೆ.

ವಕೀಲ ಜಿ ಮೋಹನ್‌ರಾಜ್‌ ನೇತೃತ್ವದ ಪ್ರಾಸಿಕ್ಯೂಷನ್‌ ಹಲವಾರು ತಜ್ಞರ ಸಾಕ್ಷ್ಯಗಳು, ವೈಜ್ಞಾನಿಕ ಪರೀಕ್ಷೆಗಳು ಮತ್ತು ಎಲ್ಲಕ್ಕಿಂತ ಗಮನಾರ್ಹವಾಗಿ ಆರೋಪಿಗಳ ತಪ್ಪನ್ನು ಸಾಬೀತುಪಡಿಸಲು ಒಂದು ಕೃತಕ ಪರೀಕ್ಷೆಯನ್ನು ಸಂಯೋಜಿಸುವ ಮೂಲಕ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಧಾನಗಳನ್ನು ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಮನೋಜ್‌ ಎಂ ಅವರು ತಮ್ಮ ತೀರ್ಪಿನಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.

ಸೆಷನ್ಸ್‌ ನ್ಯಾಯಾಲಯ ಪರಿಗಣಿಸಿದ ಪ್ರಾಥಮಿಕ ಪ್ರಶ್ನೆಗಳು ಇಂತಿವೆ:

  • ನಾಗರಹಾವಿನ ನಂಜಿನಿಂದ ಉತ್ರಾ ಸಾವು ಸಂಭವಿಸಿತೇ?

  • ಉತ್ರಾ ಸಾವಿಗೆ ಕಾರಣವಾದ ನಾಗರ ಹಾವಿನ ನಂಜನ್ನು ಕೊಲೆ ಮಾಡುವ ಉದ್ದೇಶದಿಂದ ನಾಗರಹಾವನ್ನು ಕಚ್ಚಿಸುವ ಮೂಲಕ ಏರಿಸಲಾಗಿತ್ತೆ?

ಈ ಅಂಶಗಳಲ್ಲಿ ಪರಿಗಣಿಸಬೇಕಾದ ಸಾಕ್ಷ್ಯಗಳು ಮತ್ತು ಕಾನೂನು ಅಂಶಗಳು ಒಂದರಲ್ಲೊಂದು ಮಿಳಿತವಾಗಿದ್ದರಿಂದ ಅವುಗಳನ್ನು ಒಟ್ಟಿಗೆ ಪರಿಗಣಿಸಲಾಗಿದೆ.

ಉತ್ರಾ ಸಾವಿಗೆ ಕಾರಣವಾದ ಈ ಪ್ರಕರಣದಲ್ಲಿ ನೇರವಾದ ಸಾಕ್ಷ್ಯಗಳಿಲ್ಲ. ಹಾಗಾಗಿ, ಉತ್ರಾ ಅವರು ನಾಗರಹಾವಿನ ನಂಜಿನಿಂದ ಸತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಾಂದರ್ಭಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಆಧರಿಸಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಾಸಿಕ್ಯೂಷನ್ ಪ್ರಸ್ತುತಪಡಿಸಿದ ಸಾಕ್ಷ್ಯವು ಕುಖ್ಯಾತ ಕಲ್ಪಿತ ಪ್ರಯೋಗ ಮತ್ತು ಹಲವಾರು ವೈಜ್ಞಾನಿಕ ತಜ್ಞರ ಸಾಕ್ಷ್ಯವನ್ನು ಒಳಗೊಂಡಿದೆ.

ಕೃತಕ ಪ್ರಯೋಗ

ಪ್ರಕರಣದ ಕುರಿತು ಮತ್ತಷ್ಟು ಸ್ಪಷ್ಟತೆ ಪಡೆದುಕೊಳ್ಳುವ ಉದ್ದೇಶದಿಂದ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಂದ ಅನುಮತಿ ಪಡೆದು ಅರಿಪ್ಪ ವನ್ಯ ತರಬೇತಿ ಕೇಂದ್ರದಲ್ಲಿ ಜೀವಂತ ಹಾವು ಹಾಗೂ ಉತ್ರಾ ದೇಹಾಕೃತಿಯ ಬೊಂಬೆ ಬಳಸಿ ನೈಜ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. ಈ ಸಂಬಂಧದ ವಿಡಿಯೊ ದಾಖಲಿಸಿಕೊಂಡು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಉತ್ರಾ ಕೊಠಡಿಯನ್ನು ಮರು ನಿರ್ಮಾಣ ಮಾಡಿ ಜೀವಂತ ನಾಗರಹಾವು ಬಳಸಿ ಮೊದಲು ಪ್ರಾತ್ಯಕ್ಷಿಕೆ ನಡೆಸಲಾಗಿತ್ತು.

ಉತ್ರಾ ಅವರ ಕೃತಕ ದೇಹಾಕೃತಿಯನ್ನು ಸೃಷ್ಟಿಸಿ ಅದನ್ನು ಮಂಚದ ಮೇಲೆ ಮಲಗಿಸಲಾಗಿತ್ತು. ಕೃತಕ ದೇಹದ ಕೈಗೆ ಕೋಳಿ ಮಾಂಸದ ತುಂಡನ್ನು ಕಟ್ಟಲಾಗಿತ್ತು. ಬಳಿಕ ನಾಗರಹಾವನ್ನು ಕೃತಕ ದೇಹದ ಮೇಲೆ ಬಿಡಲಾಯಿತು. ಆದರೆ, ನಾಗರಹಾವು ಕೃತಕ ದೇಹವನ್ನು ಕಚ್ಚುವ ಯತ್ನ ಮಾಡಲಿಲ್ಲ. ಅಲ್ಲಿಂದ ಸರಿದು ನೆಲಕ್ಕೆ ಬಂದಿತ್ತು.

ಹೀಗಾಗಿ, ಮಾಂಸದ ತುಂಡು ಕಟ್ಟಲಾಗಿದ್ದ ಕೃತಕ ದೇಹದ ಕೈಯನ್ನು ತೆಗೆದು ಹಾವನ್ನು ಪ್ರಚೋದಿಸಲಾಗಿತ್ತು. ಹಲವು ಪ್ರಯತ್ನ ಮತ್ತು ಪ್ರಚೋದನೆಯ ಬಳಿಕ ನಾಗರಹಾವು ಕೈಗೆ ಕಟ್ಟಲಾಗಿದ್ದ ಕೋಳಿ ಮಾಂಸದ ತುಂಡನ್ನು ಕಚ್ಚಿತ್ತು.

ಕಚ್ಚುವುದಕ್ಕೂ ಮುನ್ನ ನಾಗರಹಾವು ಹಲವು ಬಾರಿ ರಕ್ಷಣಾತ್ಮಕವಾಗಿರಲು ಪ್ರಯತ್ನಿಸಿತ್ತು. ಹಲವು ಪ್ರಯತ್ನದ ನಂತರ ನಾಗರಹಾವು ಕಚ್ಚಿತ್ತು. ಅದೇ ರೀತಿ, ಮತ್ತೊಂದು ನೈಸರ್ಗಿಕ ಕಚ್ಚುವಿಕೆಯ ಗುರುತನ್ನು ಸಹ ಕೋಳಿ ಮಾಂಸದ ತುಂಡಿನ ಮೇಲೆ ಪಡೆಯಲಾಗಿತ್ತು. ಎರಡೂ ಗುರುತಿನ ಅಗಲವು ಸಮಾನವಾಗಿ 1.7 ಸೆಂ.ಮೀ. ಇತ್ತು.

ಅಂತಿಮವಾಗಿ ಹಾವಿನ ತಲೆ ಹಿಡಿದು ಕೋಳಿ ಮಾಂಸದ ತುಂಡಿನ ಮೇಲೆ ಒತ್ತಾಯಪೂರ್ವಕವಾಗಿ ಎರಡು ಬಾರಿ ಕಚ್ಚಿಸಲಾಗಿದ್ದು, ಇದರ ಅಂತರವು 2 ರಿಂದ 2.4 ಸೆಂ. ಮೀ ಇತ್ತು. ನಾಗರಹಾವು ನೈಸರ್ಗಿಕವಾಗಿ ಕಚ್ಚಿದ್ದಕ್ಕಿಂತ ಹಿಡಿದು ಕಚ್ಚಿಸಿದ ಸಂದರ್ಭದಲ್ಲಿ ಗುರುತು ದೊಡ್ಡದಾಗಿತ್ತು.

ಮೊದಲ ಬಾರಿ ಸೂರಜ್‌ ಪತ್ನಿಯನ್ನು ಕೊಲ್ಲಲು ಬಳಸಿದ್ದ ಮಂಡಲದ ಹಾವನ್ನು ಬಳಸಿ ಎರಡನೇ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು.

ಕಲ್ಪಿತ ದೇಹಕ್ಕೆ ಸತ್ತ ಇಲಿಯನ್ನು ಕಟ್ಟಿ, ಜೀವಂತ ಮಂಡಲದ ಹಾವನ್ನು ಬಿಟ್ಟು ಎರಡನೇ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. ಉಷ್ಣ ವಿಕಿರಣ ಕಾಣದ ಹಿನ್ನೆಲೆಯಲ್ಲಿ ಮಂಡಲದ ಹಾವು ಸತ್ತ ಇಲಿಯನ್ನು ಕಚ್ಚಿರಲಿಲ್ಲ. ಆದ್ದರಿಂದ ಜೀವಂತವಾಗಿದ್ದ ಇಲಿಯನ್ನು ಕಲ್ಪಿತ ದೇಹಕ್ಕೆ ಕಟ್ಟಿ ಅದರ ಮೇಲೆ ಮಂಡಲದ ಹಾವನ್ನು ಬಿಡಲಾಗಿತ್ತು. ಇಲಿ ಯಾವಾಗ ಅತ್ತಿತ್ತ ಓಡಾಲು ಪ್ರಯತ್ನಿಸಿತ್ತೋ ಆಗ ಹಾವು ಅದನ್ನು ಕಚ್ಚಿತ್ತು.

ಉತ್ರಾ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿರುವ ನಾಗರಹಾವಿನ ಕಚ್ಚುವಿಕೆಯ ಕುರಿತಾದ ಅಭಿಪ್ರಾಯವು ಅಪಘಾತವಲ್ಲ. ಕೊಲೆ ಮಾಡುವ ಉದ್ದೇಶದಿಂದಲೇ ಕಚ್ಚಿಸಲಾಗಿದೆ ಎಂದು ಡಾ. ಶಶಿಕಲಾ ನೇತೃತ್ವದ ತಂಡ ಹೇಳಿದ್ದು, ಕಾರಣಗಳು ಇಂತಿವೆ.

  • ಎಡ ಮುಂದೋಳಿನ ಹಿಂಭಾಗದಲ್ಲಿ 2 ಮಿಮೀ ಅಂತರದಲ್ಲಿ ಎರಡು ಸತತ ಕಡಿತಗಳು ಪತ್ತೆಯಾಗಿವೆ. ನಾಗರಹಾವು ತಮ್ಮ ವಿಷವನ್ನು ಕಳೆಯುವಾಗ ಬಹಳ ಮಿತವ್ಯಯ ಮಾಡುತ್ತವೆ. ಸ್ವಾಭಾವಿಕವಾಗಿ ಒಂದು ಬಾರಿ ಕಚ್ಚಿದ ನಂತರ ಅವು ಅಲ್ಲಿಂದ ತಪ್ಪಿಸಿಕೊಳ್ಳುತ್ತವೆ.

  • ನಾಗರಹಾವಿನ ಸಾಮಾನ್ಯ ವಿಷದ ಹಲ್ಲಿನ ಅಗಲವು 1 ರಿಂದ 1.6 ಸೆಂ.ಮೀ ಆಗಿರುವಾಗ ಪ್ರತಿ ಕಚ್ಚುವಿಕೆಯಲ್ಲೂ 2.3 ಮತ್ತು 2.8 ಸೆಂ.ಮೀ ದೂರದಲ್ಲಿರುವ ಕೋರೆಹಲ್ಲುಗಳ ನಡುವಿನ ಅಂತರವಿದೆ. ಹೀಗಾಗುವುದ ಅದರ ತಲೆಯನ್ನು ಒತ್ತಿ ಕಚ್ಚಿಸಿದಾಗ ಮಾತ್ರ.

  • ಮಂಡಲ ಹಾವು ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆದ 15 ದಿನಗಳಲ್ಲೇ ನಾಗರಹಾವು ಕಚ್ಚುವುದು ಅಸಾಧಾರಣವಾಗಿದೆ.

  • ರಾಸಾಯನಿಕ ವಿಶ್ಲೇಷಣೆಯು ಚಿಕಿತ್ಸಕ ಡೋಸ್ ಮೀರಿ ಸೆಟ್ರಿಜಿನ್ ಇರುವಿಕೆಯನ್ನು ತೋರಿಸಿದೆ.

ಹಾವಿನ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಕಿಶೋರ್ ಕುಮಾರ್ ಅವರಿಗೆ ಈ ಅಂಶಗಳು ಕಂಡುಬಂದಿದ್ದವು:

  • ಈ ಹಾವು ನಾಜ ನಾಜಾ ಜಾತಿಗೆ ಸೇರಿದ್ದು, ಇದನ್ನು ಭಾರತೀಯ ಸ್ಪೆಕ್ಟಕಲ್ಡ್‌ ನಾಗರಹಾವು ಎಂದೂ ಕರೆಯುತ್ತಾರೆ.

  • ಹಾವಿನ ಸಾವು ಹೃದಯದ ಶ್ವಾಸಕೋಶದ ವೈಫಲ್ಯದಿಂದ ಆಗಿತ್ತು. ಏಕೆಂದರೆ ಹೆಡೆ ಕೆಳಗೆ ಗಾಯವಾಗಿತ್ತು. ಪರಿಶೀಲಿಸಿದಾಗ ಹಾವು 152 ಸೆಂ. ಮೀಟರ್‌ ನಷ್ಟಿತ್ತು.

ಉರಗತಜ್ಞರಾದ ಮಾವಿಷ್‌ ಕುಮಾರ್‌ ಮತ್ತಿತರರು ಕೆಳಗಿನ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಪ್ರಮುಖ ವಿಚಾರಗಳು ಇಂತಿವೆ.

  • ತನ್ನ ಒಟ್ಟಾರೆ ಉದ್ದದ ಮೂರನೇ ಇಂದು ಭಾಗದಷ್ಟು ಮಾತ್ರ ನಾಗರ ಹಾವು ಮೇಲೇರಬಲ್ಲದು. ಈ ಪ್ರಕರಣದಲ್ಲಿ ನಾಗರಹಾವಿನ ಉದ್ದ 152 ಸೆಂ. ಮೀ. ಮನೆಯ ಕಿಟಕಿಯು ತಳಮಟ್ಟದಿಂದ 62 ಸೆಂ. ಮೀ ನಷ್ಟಿದ್ದು, ಈ ಪ್ರಕರಣದಲ್ಲಿರುವ ಹಾವು ಮನೆಯನ್ನು ಪ್ರವೇಶಿಸಲಾಗದು.

  • ಉತ್ರಾ ಕೊಠಡಿಯಲ್ಲಿ ಸೀಮೆ ಎಣ್ಣೆ ಮತ್ತು ಫೆನಾಲ್ ಹಾಕಲಾಗಿದ್ದು, ಅವುಗಳ ವಾಸನೆ ಹಾವುಗಳಿಗೆ ಸಹಿಸಲಸಾಧ್ಯ.

  • ಮಂಡಲ ಹಾವು ಉತ್ರಾ ಅವರಿಗೆ ಕಚ್ಚಿದ್ದನ್ನು ಪರಿಶೀಲಿಸಿದ್ದು, ಕೆಳಗಿನ ಮಾಹಿತಿಯನ್ನು ನೀಡಿದೆ.

  • ಉತ್ತರದ ಕಾಲಿನ ಕಚ್ಚುವಿಕೆಯ ಗುರುತುಗಳು ಲಂಬವಾಗಿದ್ದು, ಕಾಲಿನ ಕೆಳಗಿನ ಭಾಗದಲ್ಲಿ ಮಂಡಲ ಹಾವು ಸಾಮಾನ್ಯವಾಗಿ ಕಚ್ಚುವಾಗ ಮೂಡುವ ನೈಸರ್ಗಿಕ ಸಮತಲದ ಕಚ್ಚುವಿಕೆಯ ಗುರುತಿಗೆ ಹೊಂದಿಕೆಯಾಗಿಲ್ಲ.

  • ಉತ್ರಾ ಮನೆಯು ಜೌಗು ಪ್ರದೇಶದಲ್ಲಿದ್ದು, ಮಂಡಲ ಹಾವು ಸಾಮಾನ್ಯವಾಗಿ ಒಣ ಪ್ರದೇಶಗಳಲ್ಲಿ ಕಂಡುಬರುತ್ತದೆ.

  • ಮಂಡಲದ ಹಾವು ಮರದ ಮೇಲೆ ವಾಸಿಸುವುದಿಲ್ಲ. ಹಾಗಾಗಿ, ಅದಕ್ಕೆ ನೈಸರ್ಗಿಕವಾಗಿ ಮಹಡಿ ಏರಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದ ತಿಳಿಯುವುದೇನೆಂದರೆ ಮಂಡಲದ ಹಾವನ್ನು ಮನೆಯ ಮೊದಲ ಮಹಡಿಗೆ ತಂದು ಉತ್ರಾಗೆ ಕಚ್ಚುವಂತೆ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಬಂದಿದೆ.

Also Read
[ಉತ್ರಾ ಕೊಲೆ ಪ್ರಕರಣ] ನಾಗರಹಾವಿನಿಂದ ಕಚ್ಚಿಸಿ ಕೊಲೆ; ಪತಿಯೇ ಅಪರಾಧಿ ಎಂದು ತೀರ್ಪಿತ್ತ ಕೇರಳ ನ್ಯಾಯಾಲಯ

ಸಾಕ್ಷಿಗಳ ಪುರಾವೆಯು ಭಾರತೀಯ ಸಾಕ್ಷ್ಯ ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳ ಪ್ರಕಾರ ತಜ್ಞರ ಸಾಕ್ಷ್ಯ ವಿಭಾಗಕ್ಕೆ ಸೇರಲಿದೆ ಎಂದು ನ್ಯಾಯಾಲಯ ಹೇಳಿದೆ.

ಪುರಾವೆಗಳನ್ನು ಪರಿಗಣಿಸಿ, ಕೃತಕ ಪ್ರಯೋಗವನ್ನು ನೋಡಿದ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿದ ಬಳಿಕ ನ್ಯಾಯಾಲಯವು “ನಾಗರಹಾವಿನ ನಂಜು ಉತ್ರ ದೇಹ ಸೇರಿದ್ದು, ನಾಗರಹಾವಿನಿಂದ ಕಚ್ಚಿಸಿದ್ದರಿಂದ ಆಕೆ ಸಾವನ್ನಪ್ಪಿದ್ದಾರೆ ಎಂಬುದನ್ನು ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಪ್ರಾಸಿಕ್ಯೂಷನ್‌ ಸಾಬೀತುಪಡಿಸಿದೆ” ಎಂದು ಹೇಳಿದೆ.

Related Stories

No stories found.
Kannada Bar & Bench
kannada.barandbench.com