ತಡೆಯಾಜ್ಞೆ ಆದೇಶ ಆರು ತಿಂಗಳ ಬಳಿಕ ತನ್ನಷ್ಟಕ್ಕೇ ತೆರವು: ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ

ತಡೆಯಾಜ್ಞೆಗಳನ್ನು ಅತಿಯಾಗಿ ವಿಸ್ತರಿಸುವಲ್ಲಿನ ನ್ಯೂನತೆಯನ್ನು ನ್ಯಾಯಾಲಯ ಒಪ್ಪಿತಾದರೂ ಅವುಗಳನ್ನು ತೆರವುಗೊಳಿಸುವಾಗ ನ್ಯಾಯಾಂಗ ತನ್ನ ವಿವೇಚನೆ ಬಳಸುವ ಅಗತ್ಯವನ್ನು ಒತ್ತಿ ಹೇಳಿತು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ
Published on

ಏಷ್ಯನ್ ರಿಸರ್ಫೇಸಿಂಗ್ ಆಫ್ ರೋಡ್ ಏಜೆನ್ಸಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಡುವಣ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ತಿಳಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಗಳಲ್ಲಿನ ಎಲ್ಲಾ ತಡೆಯಾಜ್ಞೆ ನಿರ್ದಿಷ್ಟವಾಗಿ ವಿಸ್ತರಣೆಯಾಗದ ಹೊರತು ಆರು ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು 2018ರಲ್ಲಿ ನೀಡಲಾಗಿದ್ದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ನಿರ್ದೇಶಿಸಿತ್ತು. ನ್ಯಾಯಾಲಯು ಈಗ ಈ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ತಡೆಯಾಜ್ಞೆಗಳನ್ನು ಅತಿಯಾಗಿ ವಿಸ್ತರಿಸುವಲ್ಲಿನ ನ್ಯೂನತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಒಪ್ಪಿತಾದರೂ ಅವುಗಳನ್ನು ತೆರವುಗೊಳಿಸುವಾಗ ನ್ಯಾಯಾಂಗ ವಿವೇಚನೆ ಬಳಸುವ ಅಗತ್ಯವನ್ನು ಒತ್ತಿ ಹೇಳಿತು.

"ಮೇಲಿನವುಗಳ ವಿಶಾಲ ಸೂತ್ರೀಕರಣಕ್ಕೆ ಸಂಬಂಧಿಸಿದಂತೆ ನಮಗೆ ಆಕ್ಷೇಪಣೆಗಳಿವೆ. ತಡೆಯಾಜ್ಞೆ ವಿಸ್ತರಿಸುವುದರಿಂದ ವಿಚಾರಣೆ ಅನಗತ್ಯವಾಗಿ ವಿಳಂಬವಾಗುತ್ತದೆ ಎನ್ನುವುದರಲ್ಲಿ ಯಾವುದೇ ವಿವಾದ ಇಲ್ಲವಾದರೂ, ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಲು ನ್ಯಾಯಾಲಯದ ಅಸಮರ್ಥತೆಯೂ ವಿಳಂಬವಾಗಬಹುದು ಎಂಬುದನ್ನು ಪರಿಗಣಿಸಬೇಕಾಗಿದೆ. ಹೀಗಾಗಿ ತಡೆಯಾಜ್ಞೆಯನ್ನು ಸ್ವಯಂಚಾಲಿತವಾಗಿ ತೆರವುಗೊಳಿಸಬೇಕು ಎಂಬ ತತ್ವ ರೂಪಿಸಲಾಗಿದೆ. ಆದರೆ, ನ್ಯಾಯಾಂಗ ತನ್ನ ವಿವೇಚನೆ ಬಳಸದೆ ಸ್ವಯಂಚಾಲಿತವಾಗಿ ತಡೆಯಾಜ್ಞೆ ತೆರವುಗೊಳಿಸುವುದು, ನ್ಯಾಯದ ಗಂಭೀರ ಗರ್ಭಪಾತಕ್ಕೆ ಕಾರಣವಾಗುತ್ತದೆ. ಹೀಗಾಗಿ ಏಷ್ಯನ್ ರಿಸರ್ಫೇಸಿಂಗ್‌ ಪ್ರಕರಣದಲ್ಲಿ ನೀಡಲಾದ ತೀರ್ಪು ತ್ರಿಸದಸ್ಯ ಪೀಠದ್ದಾಗಿದ್ದು ಪ್ರಕರಣವನ್ನು 5 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ" ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅಥವಾ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ತನಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

Kannada Bar & Bench
kannada.barandbench.com