ಬುಲ್ಡೋಜರ್ ಕಾರ್ಯಾಚರಣೆ: ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ, ಮಧ್ಯಂತರ ಆದೇಶ ಇಲ್ಲ

ಯಾವುದೇ ಮಧ್ಯಂತರ ಆದೇಶ ನೀಡದ ಪೀಠ ಮುಂದಿನ ವಿಚಾರಣೆಯವರೆಗೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿತು.
Justice AS Bopanna and Justice Vikram Nath
Justice AS Bopanna and Justice Vikram Nath
Published on

ಪ್ರವಾದಿ ಮುಹಮ್ಮದ್‌ ಅವರನ್ನು ಟೀಕಿಸಿದ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಕಟ್ಟಡಗಳನ್ನು ಇತ್ತೀಚೆಗೆ ಅಕ್ರಮ ತೆರವು ಕಾರ್ಯಾಚರಣೆ ಅಡಿ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್‌ ಉಲಮಾ-ಎ-ಹಿಂದ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಜಮೀಯತ್ ಉಲಮಾ-ಎ-ಹಿಂದ್‌ ಮತ್ತು ಭಾರತ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಯಾವುದೇ ಮಧ್ಯಂತರ ಆದೇಶ ನೀಡದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಮುಂದಿನ ವಿಚಾರಣೆಯವರೆಗೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿತು.

“ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿದೆ. ಈ ಮಧ್ಯೆ ನಾವು ಅವರ (ಪ್ರತಿಭಟನೆಯಲ್ಲಿ ತೊಡಗಿದವರ) ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು. ಅವರು ಕೂಡ ಸಮಾಜದ ಒಂದು ಭಾಗ ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇರಲಿ. ಯಾರಿಗಾದರೂ ಕುಂದುಕೊರತೆ ಎದುರಾದಾಗ ಅದನ್ನು ಪರಿಹರಿಸಿಕೊಳ್ಳಲು ಅವರಿಗೆ ಹಕ್ಕಿದೆ” ಎಂದು ನ್ಯಾಯಾಲಯ ಮೌಖಿಕವಾಗಿ ನುಡಿಯಿತು.

ಕಟ್ಟಡ ನೆಲಸಮ ಮಾಡುವುದನ್ನು ತಡೆಯಲಾಗದು. ಆದರೆ ಅಂತಹ ನೆಲಸಮ ಕಾರ್ಯಾಚರಣೆ ಕಾನೂನಿನ ಪ್ರಕಾರ ನಡೆದಿರಬೇಕು ಎಂದು ನ್ಯಾಯಾಲಯ ಹೇಳಿತು. “ನಾವು ನೆಲಸಮ ಕಾರ್ಯಾಚರಣೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಆದರೆ ಕಾನೂನಿನ ಪ್ರಕಾರವೇ ನಡೆಯಿರಿ ಎಂದು ಹೇಳಬಹುದು" ಎಂಬುದಾಗಿ ನ್ಯಾಯಾಲಯ ಒತ್ತಿಹೇಳಿತು.

Also Read
ಬುಲ್ಡೋಜರ್ ಕಾರ್ಯಾಚರಣೆ: ಇಂದು ಜಮೀಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಮುಂದಿನ ವಿಚಾರಣೆಯ ದಿನಾಂಕದೊಳಗೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಮ್ಮ ನಿಲುವುಗಳನ್ನು ಅಫಿಡವಿಟ್‌ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ʼತೆರವು ಕಾರ್ಯಾಚರಣೆ ವೇಳೆ ಉತ್ತರಪ್ರದೇಶಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಉಲ್ಲಂಘಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದು ಗಮನಿಸಬೇಕಾದ ಸಂಗತಿʼ ಎಂದು ಜಮೀಯತ್ ಉಲಮಾ ಎ ಹಿಂದ್‌ ನ್ಯಾಯಾಲಯದ ಮೊರೆ ಹೋಗಿತ್ತು.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಸಿ ಯು ಸಿಂಗ್‌, ಉತ್ತರ ಪ್ರದೇಶ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ವಾದ ಮಂಡಿಸಿದರು.

Kannada Bar & Bench
kannada.barandbench.com