ಪ್ರತಿಭಟನಾಕಾರರ ಮನೆ ಧ್ವಂಸ: ಮಧ್ಯ ಪ್ರವೇಶಿಸುವಂತೆ ಸಿಜೆಐಗೆ ನಿವೃತ್ತ ನ್ಯಾಯಮೂರ್ತಿಗಳ ಪತ್ರ

ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ನ್ಯಾಯವಾದಿಗಳು ಸೇರಿದಂತೆ 12 ಮಂದಿ ಪತ್ರಕ್ಕೆ ಸಹಿ ಮಾಡಿದ್ದು ಉತ್ತರ ಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
uttar pradesh and Supreme Court
uttar pradesh and Supreme Court

ಉತ್ತರ ಪ್ರದೇಶ ಸರ್ಕಾರ ಪ್ರತಿಭಟನಾಕಾರರ ಮನೆ ಧ್ವಂಸಗೊಳಿಸಿ ಹಲವರನ್ನು ಬಂಧಿಸುತ್ತಿರುವ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ನ್ಯಾಯವಾದಿಗಳು ಪತ್ರ ಬರೆದಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ನ್ಯಾಯವಾದಿಗಳು ಸೇರಿದಂತೆ ಹನ್ನೆರಡು ಮಂದಿ ಪತ್ರಕ್ಕೆ ಸಹಿ ಮಾಡಿದ್ದು ಉತ್ತರ ಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಬಿ ಸುದರ್ಶನ ರೆಡ್ಡಿ, ನ್ಯಾ ವಿ ಗೋಪಾಲ ಗೌಡ (ಕರ್ನಾಟಕ ಮೂಲದವರು), ನ್ಯಾ. ಎ ಕೆ ಗಂಗೂಲಿ, ದೆಹಲಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಭಾರತೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾ. ಎ ಪಿ ಶಾ, ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮತ್ತು ಜೈ ಭೀಮ್‌ ಸಿನಿಮಾ ಖ್ಯಾತಿಯ ನ್ಯಾ ಕೆ ಚಂದ್ರು, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಶಾಂತಿಭೂಷಣ್, ಇಂದಿರಾ ಜೈಸಿಂಗ್, ಚಂದರ್ ಉದಯ್ ಸಿಂಗ್, ಪ್ರಶಾಂತ್‌ ಭೂಷಣ್‌, ಆನಂದ್‌ ಗ್ರೋವರ್‌ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀರಾಂ ಪಂಚು ಪತ್ರಕ್ಕೆ ಸಹಿ ಮಾಡಿದ್ದಾರೆ.

Also Read
ಪೆಗಸಸ್‌ ಹಗರಣ: ಮುಂದಿನ ವಾರ ಪ್ರಕರಣವನ್ನು ಆಲಿಸಲು ಸಮ್ಮತಿಸಿದ ಸುಪ್ರೀಂ ಕೋರ್ಟ್

ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ಬಿಜೆಪಿ ವಕ್ತಾರರು ನೀಡಿದ ಹೇಳಿಕೆ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಹೇಗೆ ಪ್ರತಿಭಟನೆಗೆ ಇಂಬು ನೀಡಿತು ಎಂಬುದನ್ನು ಪತ್ರ ಎತ್ತಿ ತೋರಿಸಿದೆ. "ಪ್ರತಿಭಟನಾಕಾರರ ಅಹವಾಲು ಆಲಿಸುವ, ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಬದಲು, ಉತ್ತರಪ್ರದೇಶ ಆಡಳಿತ ಅವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳಲು ಮುಂದಾದಂತಿದೆ. "ಭವಿಷ್ಯದಲ್ಲಿ ಯಾರೂ ತಪ್ಪು ಮಾಡದಂತೆ ಅಥವಾ ಕಾನೂನನ್ನು ಕೈಗೆತ್ತಿಕೊಳ್ಳದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕೃತವಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿಯವರ ಹೇಳಿಕೆಗಳು ಪ್ರತಿಭಟನಾಕಾರರನ್ನು ಕ್ರೂರವಾಗಿ ನಡೆಸಿಕೊಳ್ಳಲು ಮತ್ತು ಅಕ್ರಮವಾಗಿ ಹಿಂಸಿಸಲು ಪೊಲೀಸರಿಗೆ ಧೈರ್ಯ ನೀಡಿವೆ ಎಂದು ಪತ್ರ ಆರೋಪಿಸಿದೆ. ಅಧಿಕಾರದಲ್ಲಿರುವವರಿಂದ ನಡೆಯುತ್ತಿರುವ ಇಂತಹ ಕ್ರೂರ ನಿಗ್ರಹವು ಕಾನೂನಾತ್ಮಕ ಆಡಳಿತವನ್ನು ಬುಡಮೇಲು ಮಾಡುವ ಹಾಗೂ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ. "ಪ್ರಭುತ್ವವು ಖಾತರಿ ಪಡಿಸಿರುವ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳನ್ನು ಇದು ಅಪಹಾಸ್ಯ ಮಾಡುತ್ತದೆ” ಎಂದು ಆರೋಪಿಸಲಾಗಿದೆ.

ಇಂತಹ ಘಟನೆಗಳು ನ್ಯಾಯಾಂಗದ ಸ್ಥೈರ್ಯವನ್ನು ಪರೀಕ್ಷೆಗೊಳಪಡಿಸುವಂತದ್ದಾಗಿದ್ದು, ಹಿಂದೆಲ್ಲಾ ಹೀಗಾದಾಗ ನ್ಯಾಯಾಂಗವು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ವಲಸೆ ಕಾರ್ಮಿಕರು ಹಾಗೂ ಪೆಗಸಸ್‌ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದನ್ನು ಸಹ ಪತ್ರ ನೆನಪಿಸಿದೆ.

ಈ ನಿರ್ಣಾಯಕ ಕಾಲಘಟ್ಟದಲ್ಲಿ ಸುಪ್ರೀಂ ಕೋರ್ಟ್‌ ಸಮರ್ಥವಾಗಿ ಸ್ಪಂದಿಸುತ್ತದೆ ಮತ್ತು ನಾಗರಿಕರು ಹಾಗೂ ಸಂವಿಧಾನವನ್ನು ನಿರಾಸೆಗೊಳಿಸುವುದಿಲ್ಲ ಎಂಬುದಾಗಿ ನಾವು ಭಾವಿಸುತ್ತೇವೆ ಎಂದು ಪತ್ರ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com