ಉತ್ತರ ಪ್ರದೇಶದಲ್ಲಿ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ-2020ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸುವಂತೆ ಕೋರಿರುವ ಉತ್ತರ ಪ್ರದೇಶ ಸರ್ಕಾರವು “ಲವ್ ಜಿಹಾದ್” ಹೆಸರಿನಲ್ಲಿ ಯಾರನ್ನೂ ಸಿಲುಕಿಸುವ ಅಂಶ ಸುಗ್ರೀವಾಜ್ಞೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಒತ್ತಾಯಪಡಿಸುವುದು, ಪ್ರಭಾವ ಬೀರುವುದು, ಆಮಿಷ ಒಡ್ಡುವುದು ಮತ್ತಿತರ ಹಾದಿಗಳ ಮೂಲಕ ಮತಾಂತರಿಸುವುದು ಮತ್ತು ಮತಾಂತರಿಸುವ ಕಾರಣಕ್ಕೆ ವಿವಾಹ ಮಾಡಿಕೊಳ್ಳುವುದು ಮುಂತಾಗಿ ಕಾನೂನುಬಾಹಿರ ಮತಾಂತರವನ್ನು ಮಾತ್ರವೇ ನಿಷೇಧಿಸುವ ಗುರಿಯನ್ನು ಸುಗ್ರೀವಾಜ್ಞೆ ಹೊಂದಿದೆ ಎಂದು ಉತ್ತರ ಪ್ರದೇಶದ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಮೂಲಕ ಸಲ್ಲಿಸಲಾಗಿರುವ ಪ್ರತಿ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಇದರ ಜೊತೆಗೆ, ಸಲಾಮತ್ ಅನ್ಸಾರಿ ವರ್ಸಸ್ ಇತರರು ವರ್ಸಸ್ ಉತ್ತರ ಪ್ರದೇಶ ಸರ್ಕಾರ ಮತ್ತು ಇತರರು ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವಂತೆಯೂ ಅಲಾಹಾಬಾದ್ ಹೈಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ ಮನವಿ ಮಾಡಿದೆ. ತಾನು ಅನುಸರಿಸುವ ಧರ್ಮದ ಆಚೆಗೆ ತನ್ನ ಇಚ್ಛೆಯ ಪುರುಷ/ಮಹಿಳೆ ಜೊತೆ ಬದುಕುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಹೇಳಿ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ವಿವಾಹದ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ಈಚೆಗೆ ನ್ಯಾಯಾಲಯ ವಜಾಗೊಳಿಸಿತ್ತು.
ಉತ್ತರ ಪ್ರದೇಶ ಸರ್ಕಾರದ ಈ ನಿರ್ಧಾರವು ಎಲ್ಲಿಯೂ ವ್ಯಕ್ತಿಯ ಅಥವಾ ಮತ್ತೊಬ್ಬರ 'ಮೂಲಭೂತ ಹಕ್ಕುಗಳ' ಪ್ರಶ್ನೆಯೊಂದಿಗೆ ವ್ಯವಹರಿಸುವುದಿಲ್ಲ ಎಂದು ಹೇಳಿದೆ.
ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಯಾವುದೇ ತೆರನಾದ ಒತ್ತಾಯಪೂರ್ವಕ ಮತಾಂತರಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲ. ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಜನರನ್ನು ಕಾನೂನುಬಾಹಿರವಾಗಿ ಅಥವಾ ಬಲಾತ್ಕಾರದಿಂದ ಮತಾಂತರ ಮಾಡುವುದರಿಂದ ತಡೆಯುವುದರ ಜೊತೆಗೆ ಜನರ ಯೋಚನಾ ಸ್ವಾತಂತ್ರ್ಯ, ನಂಬಿಕೆ, ವಿಶ್ವಾಸ ಮತ್ತು ಆಚರಣೆ ಜೊತೆಗೆ ಅವರ ಘನತೆ ಕಾಪಾಡುವುದು ಸರ್ಕಾರದ ಕರ್ತವ್ಯ.
ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ಮತ್ತೊಂದು ಧರ್ಮಕ್ಕೆ ಪ್ರವೇಶಿಸಿದಾಗ ಆಕೆ/ಆತನಿಗೆ ತಮ್ಮ ಧರ್ಮದಲ್ಲಿ ದೊರೆಯುತ್ತಿದ್ದ ಗೌರವಾಧಾರಗಳು ದೊರೆಯುವಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಅವರ ಘನತೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸಂದರ್ಭದಲ್ಲಿ ಮತಾಂತರವು ವ್ಯಕ್ತಿಯ ಆಯ್ಕೆಗೆ ವಿರುದ್ಧವಾಗಿರುವ ಸಾಧ್ಯತೆ ಇರುತ್ತದೆ.
ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಸುಗ್ರೀವಾಜ್ಞೆ ಮಾಡಲಿದೆ.
ಆತಂಕ ಆವರಿಸಿದಾಗ ಇಡೀ ಸಮುದಾಯವು ಅಳಿವಿನಂಚಿಗೆ ತಲುಪಲಿದ್ದು, ಒತ್ತಡಕ್ಕೆ ಸಿಲುಕಿ ಬಲಾತ್ಕಾರದ ಮತಾಂತರಕ್ಕೆ ತುತ್ತಾಗಬಹುದು. ಆದ್ದರಿಂದ ಇಡೀ ಸಮುದಾಯದ ಹಿತಾಸಕ್ತಿ ರಕ್ಷಿಸುವುದು ಅಗತ್ಯ.
ಪ್ರಶ್ನಾರ್ಹವಾದ ಕಾಯಿದೆಯು ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಕ್ರಮವನ್ನು ನಿರ್ವಹಿಸುತ್ತದೆ. ಇದರ ಉದ್ದೇಶ, ಸಮುದಾಯದ ಹಿತಾಸಕ್ತಿಯನ್ನು ಜತನದಿಂದ ಕಾಪಾಡುವುದಾಗಿದೆ.
ವಿವಾಹ ಬಂಧನಕ್ಕೊಳಗಾಗುವ ಇಬ್ಬರು ವಯಸ್ಕರ ಒಪ್ಪಂದಕ್ಕಿಂತ ಸಮುದಾಯದ ಹಿತ ಅತಿಮುಖ್ಯವಾಗಿದೆ.
ಇದು ಹೊಸ ಕಾನೂನಲ್ಲ. ಎಂಟು ರಾಜ್ಯಗಳಲ್ಲಿ ಇಂಥದ್ದೇ ಕಾಯಿದೆಗಳು ಜಾರಿಯಲ್ಲಿದ್ದು, ಬಲವಂತದ ಮತಾಂತರಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಒಡಿಶಾ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಛತ್ತೀಸಗಢ ಮತ್ತು ಉತ್ತರಾಖಂಡದಲ್ಲಿ ಕಾನೂನು ಜಾರಿಯಲ್ಲಿದ್ದು, ಇಂಥದ್ದೇ ಕಾಯಿದೆ ರಾಜಸ್ಥಾನದಲ್ಲಿ ಜಾರಿಯಾಗಿದೆ.
ನೆರೆಹೊರೆಯ ರಾಷ್ಟ್ರಗಳಾದ ನೇಪಾಳ, ಮಾಯನ್ಮಾರ್, ಭೂತಾನ್, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಲಾಗಿದೆ.
ಅರ್ಜಿದಾರರು ಶಫೀನ್ ಜಹಾನ್ ಅಥವಾ ಹಾದಿಯಾ ಪ್ರಕರಣವನ್ನು ಉಲ್ಲೇಖಿಸಿರುವುದನ್ನು ಪ್ರಶ್ನಿಸಿರುವ ಉತ್ತರ ಪ್ರದೇಶ ಸರ್ಕಾರವು ನಂಬಿಕೆ ಬದಲಾವಣೆಯ ಹಕ್ಕು ವಿಷಯವೇ ಅಲ್ಲ. ಬಲಾತ್ಕಾರದ ಮೂಲಕ ದಿಗಿಲು ಹುಟ್ಟಿಸಿ ಮತಾಂತರ ಮಾಡುವುದು ಪ್ರಶ್ನೆಯಾಗಿದೆ ಎಂದು ಹೇಳಿದೆ.
ಮಹಿಳೆಯ ಲೈಂಗಿಕತ್ವ ನಿಯಂತ್ರಿಸುವ ಯಾವುದೇ ಉದ್ದೇಶವನ್ನೂ ಸುಗ್ರೀವಾಜ್ಞೆಯ ನಿಬಂಧನೆಗಳು ಒಳಗೊಂಡಿಲ್ಲ. ಆದರೆ, ಮಹಿಳೆಯ ಘನತೆ ಕಾಪಾಡುವ ಉದ್ದೇಶ ಹೊಂದಲಾಗಿದೆ.
ಸುಗ್ರೀವಾಜ್ಞೆ ಜಾರಿಯ ವಿಚಾರದಲ್ಲಿ ಯಾವುದೇ ತಾರತಮ್ಯ ನೀತಿ ಅನುಸರಿಸಲಾಗುತ್ತಿಲ್ಲ. ಜನರು ಭದ್ರತೆಯ ನಂಬಿಕೆ ಹೊಂದಿದ್ದು, ಕಾನೂನು ಜಾರಿಗೊಳಿಸಿದ ಬಳಿಕ ಸುರಕ್ಷತೆಯ ಭಾವ ಹೊಂದಿದ್ದಾರೆ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.