ಕಫೀಲ್ ಖಾನ್ ಬಿಡುಗಡೆ ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ʼಸುಪ್ರೀಂʼನಲ್ಲಿ ಸಲ್ಲಿಸಿದ್ದ ಅರ್ಜಿ ಶೀಘ್ರವೇ ವಿಚಾರಣೆಗೆ

ಖಾನ್ ಅವರ ಭಾಷಣ ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿತು ಎಂಬ ಸರ್ಕಾರದ ಪ್ರತಿಪಾದನೆಗೆ ವ್ಯತಿರಿಕ್ತವಾಗಿ ಹೈಕೋರ್ಟ್ ಕೂತೂಹಲಕರ ರೀತಿಯಲ್ಲಿ “ಭಾಷಣ ನಿಜಕ್ಕೂ ರಾಷ್ಟ್ರೀಯ ಸಮಗ್ರತೆ ಮತ್ತು ಐಕ್ಯತೆಗೆ ಕರೆ ನೀಡಿತು” ಎಂದು ಉಲ್ಲೇಖಿಸಿತ್ತು.
ಕಫೀಲ್ ಖಾನ್ ಬಿಡುಗಡೆ ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ʼಸುಪ್ರೀಂʼನಲ್ಲಿ ಸಲ್ಲಿಸಿದ್ದ ಅರ್ಜಿ ಶೀಘ್ರವೇ ವಿಚಾರಣೆಗೆ

ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಲಾಗಿದ್ದ ವೈದ್ಯ ಡಾ. ಕಫೀಲ್‌ ಖಾನ್‌ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ ಕದ ತಟ್ಟಿದೆ. ಅಕ್ಟೋಬರ್ 26 ರಂದು ಸಲ್ಲಿಸಲಾಗಿದ್ದ ಮೇಲ್ಮನವಿ, ಡಿಸೆಂಬರ್ 17 ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ಖಾನ್‌ ಪರವಾಗಿ ಅವರ ತಾಯಿ ಪರ್ವೀನ್‌ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಹಾಗೂ ನ್ಯಾ. ಸೌಮಿತ್ರ ದಯಾಳ್ ಸಿಂಗ್ ಅವರಿದ್ದ ಪೀಠ ಖಾನ್‌ ಬಂಧನವನ್ನು ರದ್ದುಪಡಿಸಿತ್ತು.

"... ರಾಷ್ಟ್ರೀಯ ಭದ್ರತಾ ಕಾಯ್ದೆ, 1980ರ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಡಾ. ಕಫೀಲ್ ಖಾನ್ ಅವರನ್ನು ಬಂಧಿಸುವುದು ಅಥವಾ ಬಂಧನ ಅವಧಿಯನ್ನು ವಿಸ್ತರಿಸುವುದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ ಎಂದು ನಿರ್ಧರಿಸಲು ನಮಗೆ ಯಾವುದೇ ಹಿಂಜರಿಕೆಯಿಲ್ಲ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಡಾ. ಖಾನ್‌ ಅವರನ್ನು ಮಥುರಾ ಜೈಲಿನಲ್ಲಿ ಬಂಧಿಸಿಡಲಾಗಿತ್ತು.

ಖಾನ್ ಅವರ ಭಾಷಣ ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡಿತು ಎಂಬ ಸರ್ಕಾರದ ಪ್ರತಿಪಾದನೆಗೆ ವ್ಯತಿರಿಕ್ತವಾಗಿ ಹೈಕೋರ್ಟ್ ಕೂತೂಹಲಕರ ರೀತಿಯಲ್ಲಿ “ಭಾಷಣ ನಿಜಕ್ಕೂ ರಾಷ್ಟ್ರೀಯ ಸಮಗ್ರತೆ ಮತ್ತು ಐಕ್ಯತೆಗೆ ಕರೆ ನೀಡಿತು” ಎಂದು ಉಲ್ಲೇಖಿಸಿತ್ತು.

ತಮ್ಮ ಮಗನ ಬಿಡುಗಡೆ ಕೋರಿ ಪರ್ವೀನ್‌ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ತಿಳಿಸಿತ್ತು. ಅಲ್ಲದೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ ಅರ್ಜಿಯನ್ನು 15 ದಿನಗಳಲ್ಲಿ ತೀರ್ಮಾನಿಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.

Related Stories

No stories found.