ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೇ ಚುನಾವಣೆ ನಡೆಸುವಂತೆ ಆದೇಶ ಮಾಡಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದೆ.
ಒಬಿಸಿ ಮೀಸಲಾತಿ ಕಲ್ಪಿಸದೇ ತಕ್ಷಣ ಚುನಾವಣೆ ನಡೆಸುವಂತೆ ನ್ಯಾಯಮೂರ್ತಿಗಳಾದ ಸೌರಭ್ ಲವಾನಿಯಾ ಮತ್ತು ಡಿ ಕೆ ಉಪಾಧ್ಯಾಯ ಅವರ ನೇತೃತ್ವದ ವಿಭಾಗೀಯ ಪೀಠವು ಡಿಸೆಂಬರ್ 27ರಂದು ಆದೇಶ ಮಾಡಿತ್ತು.
ಸುಪ್ರೀಂ ಕೋರ್ಟ್ ಆದೇಶಿಸಿರುವಂತೆ ಮೂರು ಹಂತದ ಪರಿಶೀಲನೆಯ ಮೂಲಕ ಒಬಿಸಿಗೆ ಮೀಸಲಾತಿ ಕಲ್ಪಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಅಲಾಹಾಬಾದ್ ಹೈಕೋರ್ಟ್ ಆದೇಶ ಮಾಡಿತ್ತು. ಅಲ್ಲದೇ, ಸಂವಿಧಾನದ ಪ್ರಕಾರ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ನಿರ್ದಿಷ್ಟ ಆಯೋಗವನ್ನು ರಚಿಸಿ, ವಾಸ್ತವಿಕ ಅಧ್ಯಯನವನ್ನು ಸರ್ಕಾರ ನಡೆಸಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಲಾಗಿತ್ತು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೂರು ಹಂತದ ಪರಿಶೀಲನೆ ನಡೆಸದೇ ರಾಜ್ಯದಲ್ಲಿ ನಾಲ್ಕು ಮೇಯರ್ ಸ್ಥಾನಗಳನ್ನು ಒಬಿಸಿಗೆ ಮೀಸಲಿಟ್ಟು ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಡಿಸೆಂಬರ್ 5ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪೀಠವು ವಜಾ ಮಾಡಿತ್ತು.