ಉತ್ತರಾಖಂಡ ಮುಖ್ಯಮಂತ್ರಿ ಟಿ ಎಸ್ ರಾವತ್ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಅಲ್ಲಿನ ಹೈಕೋರ್ಟ್ ಮಂಗಳವಾರ ಸೂಚಿಸಿದೆ. ಇದೇ ವೇಳೆ ಆರೋಪಗಳಿದ್ದ ವೀಡಿಯೊ ಪ್ರಸಾರ ಮಾಡಿದ್ದಕ್ಕಾಗಿ ಪತ್ರಕರ್ತ ಉಮೇಶ್ ಶರ್ಮಾ ಅವರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು.
"ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧ ಮಾಡಲಾದ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಸತ್ಯವನ್ನು ಬಿಚ್ಚಿಡುವುದು ಸೂಕ್ತ ಎಂಬುದು ನ್ಯಾಯಾಲಯದ ಅಭಿಪ್ರಾಯ. ಇದು ರಾಜ್ಯದ ಹಿತದೃಷ್ಟಿಯಿಂದ ಅನುಮಾನಗಳನ್ನು ನಿವಾರಿಸುತ್ತದೆ. ಆದ್ದರಿಂದ, ಅರ್ಜಿಯನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ತನಿಖೆಗೂ ಸಹ ಪ್ರಸ್ತಾಪಿಸುತ್ತದೆ"
ಉತ್ತರಾಖಂಡ ಹೈಕೋರ್ಟ್
ಜಾರ್ಖಂಡ್‌ನ ʼಗಾಂವ್ ಸೇವಾ ಆಯೋಗʼಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಲು ಅಮೃತೇಶ್ ಸಿಂಗ್ ಚೌಹಾಣ್ ಎನ್ನುವವರು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ 25 ಲಕ್ಷ ರೂಪಾಯಿಯನ್ನು ಲಂಚವಾಗಿ ನೀಡಿದ್ದಾರೆ ಎಂದು ವೀಡಿಯೊವೊಂದರಲ್ಲಿ ಪತ್ರಕರ್ತ ಉಮೇಶ್ ಶರ್ಮಾ ಉಲ್ಲೇಖಿಸಿದ್ದರು. ಘಟನೆ 2016ರಲ್ಲಿ ನಡೆದಿದ್ದು ಆಗ ರಾವತ್ ಅವರು ಜಾರ್ಖಂಡ್ ರಾಜ್ಯದ ಬಿಜೆಪಿ ಉಸ್ತುವಾರಿಯಾಗಿದ್ದರು. ಅವರ ತಂಗಿ ಸವಿತಾ ರಾವತ್ ಮತ್ತು ಭಾವಾ ಡಾ. ಹರೇಂದ್ರ್ ಸಿಂಗ್ ರಾವತ್ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗಿತ್ತು ಎಂದು ಉಮೇಶ್ 2020ರ ವೀಡಿಯೊದಲ್ಲಿ ಆರೋಪಿಸಿದ್ದರು.
ಉಮೇಶ್ ಅವರು ಈ ಆರೋಪ ಮಾಡುತ್ತಿದ್ದಂತೆ ಡೆಹ್ರಾಡೂನ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ವಂಚನೆ, ಫೋರ್ಜರಿ, ಸಂಚು ಹಾಗೂ ಸಾಂಘಿಕ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಮೇಲ್ನೋಟಕ್ಕೆ ಇದಾವುದೂ ಉಮೇಶ್ ಶರ್ಮಾ ವಿರುದ್ಧ ಸಾಬೀತಾಗುವಂತಹ ಅಪರಾಧಗಳಲ್ಲ ಎಂದು ಅರಿತ ಹೈಕೋರ್ಟ್ ಈಗ ಎಫ್‌ಐಆರ್ ರದ್ದುಪಡಿಸಿದೆ.
ಅಲ್ಲದೆ ಉಮೇಶ್ ಶರ್ಮಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಟೀಕಿಸಿದೆ. ಸುಪ್ರೀಂಕೋರ್ಟ್‌ನ ಕೇದಾರನಾಥ್ ಸಿಂಗ್ ಪ್ರಕರಣವನ್ನು ಪ್ರಸ್ತಾಪಿಸಿದ ನ್ಯಾ. ರವೀಂದ್ರ ಮೈಥಾನಿ ಅವರಿದ್ದ ಪೀಠ ಹೀಗೆ ಅಭಿಪ್ರಾಯಪಟ್ಟಿದೆ:
ಉಮೇಶ್ ಶರ್ಮಾ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಶ್ಯಾಂ ದಿವಾನ್ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಪಿ ಎಸ್ ಪಟ್ವಾಲಿಯಾ ಮತ್ತಿತರರು ಹಾಜರಿದ್ದರು.