ಹಿಂದುತ್ವ ಸಂಘಟನೆಗಳು ಪುರೋಲಾದಲ್ಲಿ ಆಯೋಜಿಸಲು ಉದ್ದೇಶಿಸಿರುವ ಮಹಾಪಂಚಾಯತ್ ವಿರುದ್ಧ ನಾಗರಿಕ ಹಕ್ಕುಗಳ ರಕ್ಷಣಾ ಒಕ್ಕೂಟ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿರುವ ಮನವಿಯನ್ನು ನಾಳೆ ವಿಚಾರಣೆ ನಡೆಸುವುದಾಗಿ ಉತ್ತರಾಖಂಡ ಹೈಕೋರ್ಟ್ ಬುಧವಾರ ತಿಳಿಸಿದೆ.
ವಕೀಲ ಶಾರುಖ್ ಆಲಂ ಪ್ರಕರಣ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ರಾಕೇಶ್ ಥಪ್ಲಿಯಾಲ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಗೆ ಒಪ್ಪಿಕೊಂಡಿತು.
ನಿರ್ದಿಷ್ಟ ಸಮುದಾಯವೊಂದಕ್ಕೆ ಮಹಾ ಪಂಚಾಯತ್‌ಗೂ ಮುನ್ನ ಆ ಪ್ರದೇಶ ತೊರೆಯಬೇಕು ಎಂದು ಕೆಲವು ಸಂಘಟನೆಗಳು ತಾಕೀತು ಮಾಡಿವೆ. ಹಾಗಾಗಿ, ಪ್ರಕರಣವನ್ನು ತುರ್ತಾಗಿ ಆಲಿಸುವ ಅಗತ್ಯವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಹೈಕೋರ್ಟ್ ಸಂಪರ್ಕಿಸುವ ಸ್ವಾತಂತ್ರ್ಯ ಕಲ್ಪಿಸಿತು ಎಂದು ಆಲಂ ತಿಳಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಪ್ರಸ್ತಾಪಿಸಿದಾಗ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅರ್ಜಿದಾರರಿಗೆ ಹೈಕೋರ್ಟ್ ಸಂಪರ್ಕಿಸಲು ಸೂಚಿಸಿತ್ತು. ಅರ್ಜಿದಾರರು ಹೈಕೋರ್ಟ್‌ನಲ್ಲಿ ನಂಬಿಕೆ ಇಡಬೇಕು ಎಂದು ಸಲಹೆ ನೀಡಿತ್ತು.
ಹಿಂದೂ ಧರ್ಮಕ್ಕೆ ಸೇರಿದೆ ಅಪ್ರಾಪ್ತೆಯೊಬ್ಬಳನ್ನು ಒಬ್ಬ ಹಿಂದೂ ಮತ್ತು ಇನ್ನೊಬ್ಬ ಮುಸ್ಲಿಂ ಯುವಕ ಅಪಹರಿಸಿದ ಬಳಿಕ ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಮೇ 26 ರಂದು ಘಟನೆ ನಡೆದಿದ್ದು, ಅದೇ ದಿನ ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿತ್ತು. ಆರೋಪಿಗಳ ವಿರುದ್ಧ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ- 2012 ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಮು ಉದ್ವಿಗ್ನತೆ ನಡುವೆಯೇ ನಾಳೆ ಉತ್ತರಕಾಶಿ ಜಿಲ್ಲೆಯ ಸಣ್ಣ ಪಟ್ಟಣ ಪುರೋಲಾದಲ್ಲಿ ಮಹಾ ಪಂಚಾಯತ್ ನಡೆಯಲಿದೆ.
ಮಹಾಪಂಚಾಯತ್ ತಡೆಯುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಅವರಿಗೆ ಎರಡು ಪತ್ರ ಮನವಿಗಳನ್ನು ಹಿಂದಿ ವಿದ್ವಾಂಸರಾದ ಅಶೋಕ್ ವಾಜಪೇಯಿ, ಅಪೂರ್ವಾನಂದ್ ಹಾಗೂ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ (ಪಿಯುಸಿಎಲ್) ಸಂಘಟನೆ ಸಲ್ಲಿಸಿವೆ.
ಮಹಾಪಂಚಾಯತ್ ನಡೆದರೆ ಕೋಮು ಉದ್ವಿಗ್ನತೆ ಇನ್ನಷ್ಟು ಹೆಚ್ಚುತ್ತದೆ. ಕೋಮು ಹಿಂಸಾಚಾರ ಕುರಿತು ತಕ್ಷಣ ತಮ್ಮ ಗಮನ ಸೆಳೆಯಲು ಅರ್ಜಿ ಸಲ್ಲಿಸುತ್ತಿದ್ದೇವೆ. ಉತ್ತರಾಖಂಡ್ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.