ಉತ್ತರಕಾಶಿ ಸುರಂಗ ಕುಸಿತ: ಸರ್ಕಾರದ ರಕ್ಷಣಾ ಕಾರ್ಯಕ್ಕೆ ಉತ್ತರಾಖಂಡ ಹೈಕೋರ್ಟ್ ತೃಪ್ತಿ

ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗ ನವೆಂಬರ್ 12ರಂದು ಭಾಗಶಃ ಕುಸಿದು 41 ಕಾರ್ಮಿಕರು ಅದರೊಳಗೆ ಸಿಲುಕಿದ್ದರು. ಅವರನ್ನು ರಕ್ಷಿಸುವ ಯತ್ನ ನಡೆಯುತ್ತಿದೆ.
ಉತ್ತರಾಖಂಡ ಹೈಕೋರ್ಟ್
ಉತ್ತರಾಖಂಡ ಹೈಕೋರ್ಟ್
Published on

ಉತ್ತರಕಾಶಿ ಜಿಲ್ಲೆಯ ಭಾಗಶಃ ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಕಳೆದ 48 ಗಂಟೆಗಳಲ್ಲಿ ಸರ್ಕಾರ ಕೈಗೊಂಡ ಪ್ರಯತ್ನಗಳ ಬಗ್ಗೆ ಉತ್ತರಾಖಂಡ ಹೈಕೋರ್ಟ್ ಗುರುವಾರ ತೃಪ್ತಿ ವ್ಯಕ್ತಪಡಿಸಿದೆ.

ಡಿಸೆಂಬರ್ 1ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಅಂದು, ಕಾರ್ಯಾಚಾರಣೆಯಲ್ಲಿ ಉಂಟಾದ ಪ್ರಗತಿಯ ಬಗ್ಗೆ ತಿಳಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಮತ್ತು ನ್ಯಾಯಮೂರ್ತಿ ಪಂಕಜ್ ಪುರೋಹಿತ್ ಅವರಿದ್ದ ಪೀಠ ಸರ್ಕಾರಕ್ಕೆ ಸೂಚಿಸಿದೆ.

"ಕಳೆದ 48 ಗಂಟೆಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಮಗೆ ತೃಪ್ತಿ ಇದೆ. ಡಿಸೆಂಬರ್ 1, 2023ಕ್ಕೆ ಪ್ರಕರಣ ಪಟ್ಟಿ ಮಾಡಿ, ಆ ದಿನದಂದು, ಸರ್ಕಾರಿ ವಕೀಲರು ಪ್ರಕರಣದಲ್ಲಿ ಆಗಿರುವ ಮುಂದಿನ ಪ್ರಗತಿಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು" ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಸರ್ಕಾರೇತರ ಸಂಸ್ಥೆ (ಎನ್‌ಜಿಒ) ʼಸಮಾಧಾನ್ʼ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗ ನವೆಂಬರ್ 12ರಂದು ಭಾಗಶಃ ಕುಸಿದು 41 ಕಾರ್ಮಿಕರು ಅದರೊಳಗೆ ಸಿಲುಕಿದ್ದರು. ಅಂದಿನಿಂದ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಸವಾಲುಗಳನ್ನು ಎದುರಿಸುತ್ತಿದೆ ಎಂದಿರುವ ಎನ್‌ಜಿಒ, ಸರ್ಕಾರ ಮತ್ತು ಕಾರ್ಯನಿರ್ವಾಹಕ ಸಂಸ್ಥೆ ಸಿಕ್ಕಿಬಿದ್ದ ವ್ಯಕ್ತಿಗಳ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ಕೂಡ ಆರೋಪಿಸಿತ್ತು.

Also Read
ಮೋರ್ಬಿ ಸೇತುವೆ ಕುಸಿತ ಭಾರೀ ದುರಂತ ಎಂದ ಸುಪ್ರೀಂ: ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್‌ಗೆ ಸೂಚನೆ

ನವೆಂಬರ್ 21ರಂದು ಪ್ರಕರಣವನ್ನು ಮೊದಲು ಕೈಗೆತ್ತಿಕೊಂಡಿದ್ದ ಹೈಕೋರ್ಟ್‌, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಅದರಂತೆ ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸಿತ್ತು.

ಸುರಂಗದೊಳಗೆ ಸಿಲುಕಿರುವ ವ್ಯಕ್ತಿಗಳಿಗೆ ಆಹಾರ ಪದಾರ್ಥ, ಔಷಧ, ಕುಡಿಯುವ ನೀರು ಇತ್ಯಾದಿಗಳನ್ನು ಸರಬರಾಜು ಮಾಡಲಾಗಿದೆ. ಅವರಿಗೆ ವಾಕಿ-ಟಾಕಿ ಸೆಟ್ ಸಹ ಒದಗಿಸಲಾಗಿದೆ. ಇದರಿಂದ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ರಕ್ಷಣಾ ತಂಡದೊಂದಿಗೆ ಸಂವಹನ ನಡೆಸಬಹುದಾಗಿದೆ ಎಂದು ರಾಜ್ಯದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದಂತೆ ದೊರೆಯುವ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಮತ್ತು ಅವರನ್ನು ಆದಷ್ಟು ಬೇಗ ರಕ್ಷಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನ್ಯಾಯಾಲಯವು ಸಲ್ಲಿಕೆಗಳನ್ನು ಗಮನಿಸಿ ಪ್ರಕರಣವನ್ನು ಡಿಸೆಂಬರ್ 1ಕ್ಕೆ ಮುಂದೂಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Uttrakhand High Court.pdf
Preview
Kannada Bar & Bench
kannada.barandbench.com