ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಮಾಜಿ ಸಚಿವ ನಾಗೇಂದ್ರ ಜಾಮೀನು ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಇ ಡಿ

ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದೆ.
ED and B Nagendra
ED and B Nagendra
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ  ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೊದಲನೇ ಆರೋಪಿ ಮಾಜಿ ಸಚಿವ ಬಿ ನಾಗೇಂದ್ರಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಲು ಕೋರಿ ಜಾರಿ ನಿರ್ದೇಶನಾಲಯುವ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ.

ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದೆ.

“ಈ ಪ್ರಕರಣದಲ್ಲಿ ನಾಗೇಂದ್ರ ಅವರು ಚುನಾವಣೆ ಬಳಕೆಗೆ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಮತ್ತು ಈ ಕುರಿತಂತೆ ಸಾಕಷ್ಟು ಸಾಕ್ಷ್ಯಗಳನ್ನು ತನಿಖೆಯ ವೇಳೆ ಪತ್ತೆ ಮಾಡಲಾಗಿದೆ. ಅಂತೆಯೇ, ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್‌ 45ರ ಅನುಸಾರ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಹಾಗಾಗಿ, ಪ್ರಕರಣದ ಪ್ರಮುಖ ಆರೋಪಿಯಾದ ಬಿ ನಾಗೇಂದ್ರ ಅವರಿಗೆ ವಿಚಾರಣಾಧೀನ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ರದ್ದುಪಡಿಸಬೇಕು” ಎಂದು ಇಡಿ ಅರ್ಜಿಯಲ್ಲಿ ಕೋರಿದೆ.

Also Read
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ: ಮಾಜಿ ಸಚಿವ ಬಿ ನಾಗೇಂದ್ರಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 144 ಪುಟಗಳ ದೂರನ್ನು ಸಲ್ಲಿಸಿತ್ತು. ದೂರಿನನ್ವಯ, ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ 4,970 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ.

Kannada Bar & Bench
kannada.barandbench.com