ED and Karnataka HC
ED and Karnataka HC

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ: ಇ ಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ಆದೇಶ ವಿಸ್ತರಿಸಿದ ಹೈಕೋರ್ಟ್‌

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸಲು ಎಸ್‌ಐಟಿಗೆ ಅನುಮತಿಸಿದೆ. ಈ ಸಂಬಂಧ ಅರ್ಜಿ ತಿದ್ದುಪಡಿ ಮಾಡಿ ಅದನ್ನು ಪ್ರಶ್ನಿಸಿ, ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ ವಕೀಲ ಮಧುಕರ್‌ ದೇಶಪಾಂಡೆ.
Published on

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಿಚಾರಣೆಯ ನೆಪದಲ್ಲಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ತಡೆ ವಿಧಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಿಸ್ತರಿಸಿದೆ.

ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್‌ ಮಿತ್ತಲ್‌ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಎಫ್‌ಐಆರ್‌ಗೆ ತಡೆ ನೀಡುವ ಮೂಲಕ ನ್ಯಾಯಾಲಯವು ರಕ್ಷಣೆ ಒದಗಿಸಿದೆ. ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕಿತ್ತು. ಆದರೆ, ಈ ಬಗ್ಗೆ ಮಾಹಿತಿ ಇಲ್ಲ” ಎಂದರು.

ಆಗ ಪೀಠವು “ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ. ಸಮಯ ಕೇಳುತ್ತಿದ್ದಾರೆ” ಎಂದರು. ಇದಕ್ಕೆ ಎಎಸ್‌ಜಿ ಅವರು “ಸಮಯ ಕೊಡಬಹುದು. ಆದರೆ, ಮಧ್ಯಂತರ ಪರಿಹಾರವನ್ನು ಮುಂದುವರಿಸಬೇಕು” ಎಂದರು.

ಈ ಮಧ್ಯೆ, ಜಾರಿ ನಿರ್ದೇಶನಾಲಯದ ಪರವಾಗಿ ಖುದ್ದು ನ್ಯಾಯಾಲಯದಲ್ಲಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಎಸ್‌ಐಟಿ ತನಿಖೆಗೆ ಅನುಮತಿಸಿದೆ. ಈ ಆದೇಶವನ್ನು ಪ್ರಶ್ನಿಸಲಾಗಿದೆ. ಹೀಗಾಗಿ, ಸಂಬಂಧ ಅರ್ಜಿ ತಿದ್ದುಪಡಿ ಮಾಡಿ ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೇವೆ. ಹೊಸ ಅರ್ಜಿಯಲ್ಲಿ ಹೆಚ್ಚುವರಿ ಕೋರಿಕೆ ಸೇರಿಸಿದ್ದೇವೆ” ಎಂದರು.

ಇದಕ್ಕೆ ಪೀಠವು “ಇಡೀ ಪ್ರಕರಣಕ್ಕೆ ತಡೆಯಾಜ್ಞೆ ವಿಧಿಸಲಾಗಿದೆಯಲ್ಲವೇ? ರಾಜ್ಯ ಸರ್ಕಾರ ಇ ಡಿಗೆ ಅಡ್ಡಿಪಡಿಸುತ್ತಿದೆಯೇ” ಎಂದು ಪ್ರಶ್ನಿಸಿದರು. ಇದಕ್ಕೆ ನಕಾರಾತ್ಮಕವಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಪೀಠವು “ದೂರುದಾರರು ಮತ್ತು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ಹತ್ತು ದಿನ ಸಮಯ ಕೇಳಿದ್ದಾರೆ. ಸೆಪ್ಟೆಂಬರ್‌ 19ರವರೆಗೆ ಕಾಲಾವಕಾಶ ನೀಡಲಾಗಿದೆ. ಮಧ್ಯಂತರ ಆದೇಶ ಮುಂದುವರಿಯಲಿದೆ” ಎಂದು ಆದೇಶಿಸಿತು. 

Also Read
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಇ ಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್‌ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ವಿಚಾರಣೆಗಾಗಿ ಸಮನ್ಸ್‌ ಜಾರಿ ಮಾಡಿದ್ದ ಇ ಡಿ ಅಧಿಕಾರಿಗಳು ಪ್ರಕರಣದಲ್ಲಿ ಸಿಲುಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ಹೆಸರು ಹೇಳುವಂತೆ ಬೆದರಿಕೆ ಹಾಗೂ ಒತ್ತಡ ಹಾಕಿದ್ದಾರೆ ಎಂದು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಠಾಣೆಗೆ ಮನೋಜ್‌ ಮಿತ್ತಲ್‌ ಮತ್ತು ಮುರಳಿ ಕಣ್ಣನ್‌ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 3(5), 351(2) ಮತ್ತು 352 ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com