.jpeg?w=480&auto=format%2Ccompress&fit=max)
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಕೋರಿರುವ ವಿಚಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಾದವಾಗಿ ಮಾರ್ಪಟ್ಟಿದೆ ಎಂಬ ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ವಿ ಆಚಾರ್ಯ ವಾದವನ್ನು ಪುರಸ್ಕರಿಸದ ಕರ್ನಾಟಕ ಹೈಕೋರ್ಟ್, ಯೂನಿಯನ್ ಬ್ಯಾಂಕ್ ಇಂಡಿಯಾ ಸಲ್ಲಿಸಿರುವ ಅರ್ಜಿಯ ಊರ್ಜಿತತ್ವದ ವಾದ ಆಲಿಸಲು ಮಂಗಳವಾರ ಮುಂದಡಿ ಇಟ್ಟಿತು.
ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಬಿ ವಿ ಆಚಾರ್ಯ ಅವರು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದವಾಗಿದೆ” ಎಂದರು.
ಅದಕ್ಕೆ ಪೀಠವು ಇದನ್ನು “ನಾನು ಒಪ್ಪುವುದಿಲ್ಲ. ಇದು ಕೇಂದ್ರ ಮತ್ತು ರಾಜ್ಯದ ವಿವಾದವಲ್ಲ” ಎಂದರು. ಆಗ ಆಚಾರ್ಯ ಅವರು “ಕೇಂದ್ರ ಸರ್ಕಾರ ಜಾರಿ ಮಾಡಿರುವ ಸುತ್ತೋಲೆಯನ್ನು ರಿಟ್ ಅರ್ಜಿಯಲ್ಲಿ ಆಧರಿಸಲಾಗಿದೆ. ಇಡೀ ಅರ್ಜಿಯ ಆಧಾರವೇ ಅದಾಗಿದೆ. ಈ ಸುತ್ತೋಲೆಯು ಪೊಲೀಸ್ ಮತ್ತು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಮಧ್ಯಪ್ರವೇಶಿಸಬಹುದೇ?” ಎಂದರು. ಇದಕ್ಕೆ ನ್ಯಾ. ನಾಗಪ್ರಸನ್ನ ಅವರು “ಅರ್ಹತೆಯ ಮೇಲೆ ಉತ್ತರಿಸುತ್ತೇನೆ” ಎಂದರು.
ಈ ವೇಳೆ ಆಚಾರ್ಯ ಅವರು ಪಶ್ಚಿಮ ಬಂಗಾಳ ವರ್ಸಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿದರು. ಇದಕ್ಕೆ ಪೀಠವು “ಪ್ರಕರಣ ಆಲಿಸುವುದಕ್ಕಾಗಿ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದ ಎಂದು ಸುಪ್ರೀಂ ಕೋರ್ಟ್ ಹೇಳಿದೆಯೇ? ಅರ್ಜಿಯ ಊರ್ಜಿತತ್ವದ ವಿಚಾರವನ್ನು ಎತ್ತಿರುವುದರಿಂದ ಇದನ್ನು ಪರಿಶೀಲಿಸುತ್ತೇನೆ” ಎಂದರು.
ಆಗ ಆಚಾರ್ಯ ಅವರು “ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದವಾದಾಗ ಇತರೆ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿ ನಿರ್ಬಂಧವಾಗುತ್ತದೆ” ಎಂದರು. ಆಗ ಪೀಠವು “ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಇದರ ಬಗ್ಗೆ ನನಗೆ ತಿಳಿದಿಲ್ಲ. ಮೊದಲಿಗೆ ಅರ್ಜಿಯ ಊರ್ಜಿತತ್ವವನ್ನು ನಿರ್ಧರಿಸಲಾಗುವುದು” ಎಂದಿತು. ಮುಂದುವರೆದು, "ಇದು ರಾಜ್ಯ ಮತ್ತು ಕೇಂದ್ರದ ನಡುವಿನ ವಿವಾದವಲ್ಲ. ವ್ಯಕ್ತಿ ಹಾಗೂ ನಿಧಿಯನ್ನು ದುರುಪಯೋಗ ಮಾಡಿರುವ ನಿಗಮದ ನಡುವಿನ ಪ್ರಕರಣವಾಗಿದೆ. ಪ್ರಕರಣದಲ್ಲಿ ಸಿಬಿಐ ವಿಚಾರಣೆಯನ್ನು ಯೂನಿಯನ್ ಬ್ಯಾಂಕ್ ಕೇಳಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರದ ನಡುವಿನ ವಿವಾದ ಎಲ್ಲಿದೆ?" ಎಂದು ಆಕ್ಷೇಪಿಸಿತು.
ಆನಂತರ ಅರ್ಜಿಯ ಊರ್ಜಿತತ್ವದ ಕುರಿತು ವಾದಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು “ಅರ್ಜಿಯು ದೆಹಲಿ ವಿಶೇಷ ಪೊಲೀಸ್ ಕಾಯಿದೆಯನ್ನು ಆಧರಿಸುವುದಿಲ್ಲ. ನಾವು ಡಿಎಸ್‌ಪಿ ಕಾಯಿದೆ ವ್ಯಾಪ್ತಿಯಲ್ಲಿಲ್ಲ. ಇದು ೧೯೪೦ರ ಕಾಯಿದೆಯಾಗಿದ್ದು, ೧೯೪೯ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ಅಸ್ತಿತ್ವಕ್ಕೆ ಬಂದಿದೆ. ಸೆಕ್ಷನ್ ೩೫ಎ ಸ್ಪಷ್ಟವಾಗಿದ್ದು, ಬ್ಯಾಂಕ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಿಶೇಷ ಕಾಯಿದೆ ಇದೆ. ಬ್ಯಾಂಕ್ ವಂಚನೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಆರ್‌ಬಿಐ ಸೆಕ್ಷನ್ ೩೫ಎ ಅಡಿ ಮಾಸ್ಟರ್ ಸುತ್ತೋಲೆ ಹೊರಡಿಸಿದೆ. ಇದರ ಅನ್ವಯ ಸಿಬಿಐ ತನಿಖೆಗೆ ಕೋರಲಾಗಿದೆ. ರಾಜ್ಯ ಸರ್ಕಾರವು ಸಿಬಿಐ ತನಿಖೆಗೆ ಸಾಮಾನ್ಯವಾಗಿ ಒಪ್ಪುತ್ತದೆ. ಆದರೆ, ಕೆಲವು ಸಂದರ್ಭದಲ್ಲಿ ಸಿಬಿಐ ತನಿಖೆ ಅಗತ್ಯವೇನಿದೆ ಎನ್ನುತ್ತದೆ” ಎಂದರು.
“ದೇಶದ ಆರ್ಥಿಕ ಶಿಸ್ತಿನ ವಿಚಾರದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಸ್ಥಾನ ನಿಭಾಯಿಸುತ್ತದೆ. ವಿತ್ತೀಯ ಶಿಸ್ತು ಭಾರಿ ಪ್ರಮಾಣದಲ್ಲಿ ಪ್ರಭಾವ ಮತ್ತು ಪರಿಣಾಮ ಉಂಟು ಮಾಡುತ್ತದೆ. ಬ್ಯಾಂಕ್‌ಗಳು ಇಂದು ಹಲವು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪ್ರಾಮಾಣಿಕತೆ ಕಾಯುವುದು ಅಗತ್ಯವಾಗಿದೆ. ಹೀಗಾಗಿ, ಸಿಬಿಐ ತನಿಖೆ ಅಗತ್ಯ” ಎಂದರು.
ಅಂತಿಮವಾಗಿ ಪ್ರತಿವಾದಿಗಳಿಗೆ ವಾದಿಸಲು ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಿ ವಿಚಾರಣೆ ಮುಂದೂಡಲಾಯಿತು.