ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ನೆಕ್ಕಂಟಿ ನಾಗರಾಜ್‌ಗೆ ನೀಡಲಾಗಿರುವ ಮಧ್ಯಂತರ ರಕ್ಷಣೆ ರದ್ದತಿ ಎಚ್ಚರಿಸಿದ ಹೈಕೋರ್ಟ್‌

“ನೆಕ್ಕಂಟಿ ನಾಗರಾಜ್‌ ಜೂನ್ 23ರಂದು ಸಿಬಿಐ ಮುಂದೆ ಹಾಜರಾಗಬೇಕು ಮತ್ತು ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಬೇಕು. ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ಮಧ್ಯಂತರ ರಕ್ಷಣೆ ರದ್ದುಪಡಿಸಲಾಗುವುದು” ಎಂದ ನ್ಯಾಯಾಲಯ.
B Nagendra &  Karnataka HC
B Nagendra & Karnataka HC
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ದುರ್ಬಳಕೆ ಪ್ರಕರಣದ ಆರೋಪಿಯಾದ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌; ಸಿಬಿಐ ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ನಿರೀಕ್ಷಣಾ ಜಾಮೀನು ಕೋರಿದ ಅರ್ಜಿಯಲ್ಲಿ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ರದ್ದುಪಡಿಸುವುದಾಗಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಎಚ್ಚರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ನೆಕ್ಕಂಟಿ ನಾಗರಾಜ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಮತ್ತು ಮಾಜಿ ಸಚಿವ ಎಂ ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ 2026ರ ಜನವರಿ 14ರಂದು ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿರುವ ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ನೆಕ್ಕಂಟಿ ನಾಗರಾಜ್‌ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ, ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ನೆಕ್ಕಂಟಿ ನಾಗರಾಜ್‌ ಜೂನ್ 23ರಂದು ಸಿಬಿಐ ಮುಂದೆ ಹಾಜರಾಗಬೇಕು ಮತ್ತು ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಬೇಕು. ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ಮಧ್ಯಂತರ ರಕ್ಷಣೆ ರದ್ದುಪಡಿಸಲಾಗುವುದು” ಎಂದು ಎಚ್ಚರಿಸಿತು.

ಅಂತೆಯೇ, ಆರೋಪಿಯು ನೀಡಿದ ಉತ್ತರವನ್ನು ಹೈಕೋರ್ಟ್‌ಗೆ ಸಲ್ಲಿಸುವಂತೆ ಸಿಬಿಐ ಪರ ವಕೀಲರಿಗೆ ನಿರ್ದೇಶಿಸಿ, ಆರೋಪಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

ನಿರೀಕ್ಷಣಾ ಜಾಮೀನು ಕೋರಿರುವ ಈ ಅರ್ಜಿಯಲ್ಲಿ ನೆಕ್ಕಂಟಿ ನಾಗರಾಜ್‌ ಅವರಿಗೆ ಹೈಕೋರ್ಟ್‌ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆಯೇ ಆದೇಶಿಸಿದೆ. 

Also Read
ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ಶಾಸಕ ನಾಗೇಂದ್ರ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ಅಂತೆಯೇ, ನಾಗೇಂದ್ರ ಅವರ ಅರ್ಜಿಯಲ್ಲಿ ವಾದ ಮಂಡಿಸಿದ ಪ್ರಸನ್ನ ಕುಮಾರ್ ಅವರು ನಿಗಮದ ಬ್ಯಾಂಕ್ ಖಾತೆಯಿಂದ ಮುಂಬೈನ ಇಬ್ಬರು ಮಹಿಳೆಯರಿಗೆ ₹2.50 ಕೋಟಿ ವರ್ಗಾವಣೆಯಾಗಿದೆ. ಮಹಿಳೆಯರಲ್ಲಿ ಒಬ್ಬರು ತನ್ನನ್ನು ಬಿ ನಾಗೇಂದ್ರ ಅವರ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಇದು ಲಭ್ಯವಾಗಿರುವ ದಾಖಲೆಗಳಲ್ಲೂ ಕಂಡುಬಂದಿದೆ. ಆರೋಪಿಗಳ ಮೊಬೈಲ್‌ನಲ್ಲಿ ಕೆಲವು ವಿಡಿಯೊಗಳು ಪತ್ತೆಯಾಗಿವೆ. ಇದರಲ್ಲಿ ಹಣದ ಕಂತೆ ಎಣಿಸುತ್ತಿರುವ ದೃಶ್ಯಗಳಿವೆ. ಅಲ್ಲಿ ನೆಕ್ಕಂಟಿ ನಾಗರಾಜ್‌ ಮತ್ತಿತರರು ಕಂಡು ಬರುತ್ತಾರೆ. ಈ ಬಗ್ಗೆ ಕೇಳಿದರೆ ಆರೋಪಿಗಳು ವಿಚಾರಣೆಯಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಬೇಕಾಗಿದೆ. ಆದ್ದರಿಂದ, ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಇದನ್ನು ಮನ್ನಿಸಿದ ಪೀಠವು ಜೂನ್‌ 29ರಂದು ಸಿಬಿಐ ಮುಂದೆ ಹಾಜರಾಗುವಂತೆ ನಾಗೇಂದ್ರ ಅವರಿಗೆ ನಿರ್ದೇಶಿಸಿತು. ಏತನ್ಮಧ್ಯೆ, ಬಿ ನಾಗೇಂದ್ರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠವು ಎರಡೂ ಅರ್ಜಿಗಳ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿ ಆದೇಶಿಸಿತು.

Kannada Bar & Bench
kannada.barandbench.com