ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ವಸ್ತುಸ್ಥಿತಿ ವರದಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಕೇಳಿದೆ [ಸೌರಭ್ ಭಾರದ್ವಾಜ್ ವರ್ಸಸ್ ದೆಹಲಿ ಪೊಲೀಸ್].
ಎರಡು ವಾರದೊಳಗೆ ವಸ್ತುಸ್ಥಿತಿ ವರದಿಯನ್ನು ದೆಹಲಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾ. ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠವು ಆದೇಶಿಸಿತು.
ಘಟನೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಲು ಕೋರಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಗುರುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೀಠವು, "ಅಲ್ಲಿ ಪೊಲೀಸ್ ಪಡೆಯು ಅಗತ್ಯವಿರುವಷ್ಟು ಇರಲಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿದ್ದ ಪೊಲೀಸರು ತಡೆಯುವ ಪ್ರಯತ್ನ ಮಾಡಿದರು, ಆದರೆ ಗುಂಪಿನ ಸಂಖ್ಯೆ ಅವರಿಗಿಂತ ದೊಡ್ಡದಿತ್ತು. ಹಾಗಾಗಿ, ನಿಮ್ಮ ಬಂದೋಬಸ್ತ್ ಏನಿತ್ತು ಎನ್ನುವುದರ ಬಗ್ಗೆ ನೀವು ವಿವರಣೆ ನೀಡಬೇಕು," ಎಂದು ದೆಹಲಿ ಪೊಲೀಸರಿಗೆ ಹೇಳಿತು.
ಘಟನೆಯ ಬಗ್ಗೆ ನ್ಯಾಯಾಲಯವು ನಿಗಾವಹಿಸುವುದು ತಪ್ಪು ಸಂದೇಶ ರವಾನೆಗೆ ಕಾರಣವಾಗಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಈ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, "ನೋಟಿಸ್ ನೀಡಿರುವುದರ ಬಗ್ಗೆ ನೀವು ಅಷ್ಟು ಸೂಕ್ಷ್ಮವಾಗಿ ಪ್ರತಿಕ್ರಿಯಿಸುವುದಾದರೆ ನೀವು ಮುಂಚಿತವಾಗಿಯೇ ಹಾಜರಾಗಿ (ಅಡ್ವಾನ್ಸ್ ನೋಟಿಸ್) ಎಂದು ನಾವು ಹೇಳ ಬೇಕಾಗುತ್ತದೆ. ನೀವು ಘಟನೆಯ ಬಗ್ಗೆ ಗಂಭೀರವಾಗಿದ್ದೀರಿ ಎನ್ನುವುದರ ಬಗ್ಗೆ ನಮಗೆ ಗೊತ್ತಾಗಬೇಕಿದೆ," ಎಂದಿತು.
ಭಾರದ್ವಾಜ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ, "ಅವರು ಗೇಟ್‌ಅನ್ನು ಮುರಿದು ಒಳನುಗ್ಗಿದ್ದಾರೆ. ಇದೇ ಘಟನೆಯನ್ನು ಬೇರೆ ಇನ್ನಾವುದೇ ಹುದ್ದೆಯಲ್ಲಿರುವವರಿಗೆ ಒಮ್ಮೆ ಅನ್ವಯಿಸಿ ದಯವಿಟ್ಟು ನೋಡಿ. ಮೈ ಲಾರ್ಡ್ಸ್, ಹಾಗಾಗಿದ್ದರೆ ಭೂಮಿಆಕಾಶವನ್ನೇ ಒಂದು ಮಾಡಿಬಿಡಲಾಗುತ್ತಿತ್ತು. ತಲೆಗಳು ಉರುಳುತ್ತಿದ್ದವು. ಆದರೆ, ಇಲ್ಲಿ ನಮ್ಮ ಸಂಭಾವಿತ ಗೆಳೆಯರು ನೋಟಿಸ್‌ಗೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ," ಎಂದು ಆಕ್ಷೇಪಿಸಿದರು.
ಮುಂದುವರೆದು, ಇಂತಹ ಸಂದರ್ಭಗಳಲ್ಲಿ ನಮಗೆ ಸಾಂವಿಧಾನಿಕ ನ್ಯಾಯಾಲಯಗಳೇ ಶ್ರೀರಕ್ಷೆ ಎಂದರು. "ದೆಹಲಿ ಸಿಎಂ ಆದ ಮಾತ್ರಕ್ಕೆ ನೀವು ಅವರ ಸ್ಥಾನಮಾನವನ್ನು ಕುಗ್ಗಿಸಲಾಗದು. ತಮ್ಮದೇ ವೈಫಲ್ಯದ ಬಗ್ಗೆ ವಸ್ತುನಿಷ್ಠವಾಗಿ ತನಿಖೆ ನಡೆಸಲು ದೆಹಲಿ ಪೊಲೀಸರು ಕೊನೆಯ ಆಯ್ಕೆಯಾಗಬೇಕು," ಎಂದು ಹೇಳಿದರು. ಆ ಮೂಲಕ ಘಟನೆಯ ಕುರಿತು ನ್ಯಾಯಾಂಗ ನಿರ್ದೇಶಿತ ತನಿಖೆಗೆ ಆಗ್ರಹಿಸಿದರು.