ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದೆದುರು ಪ್ರತಿಭಟನಾ ನಿರತ ಗುಂಪೊಂದು ದಾಂಧಲೆ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಲು ಕೋರಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಗುರುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ [ಸೌರಭ್ ಭಾರದ್ವಾಜ್ ವರ್ಸ್ ದೆಹಲಿ ಪೊಲೀಸ್, ಭಾರತ ಸರ್ಕಾರ].
ತಮ್ಮ ಮನವಿಯಲ್ಲಿ ಭಾರದ್ವಾಜ್ ಅವರು, "ದೆಹಲಿ ಮುಖ್ಯಮಂತ್ರಿಯವರ ರಕ್ಷಣೆಯ ಹೊಣೆ ಹೊತ್ತು ದೆಹಲಿ ಪೊಲೀಸರು ತಮ್ಮ ಕರ್ತವ್ಯದಿಂದ ಸಂಪೂರ್ಣ ವಿಮುಖರಾಗಿ, ತಾವು ಸಂವಿಧಾನ ಬದ್ಧವಾಗಿ ಚುನಾಯಿತರಾದವರನ್ನು ರಕ್ಷಿಸುತ್ತಿದ್ದೇವೆ ಎನ್ನುವುದನ್ನು ಗಣನೆಗೇ ತೆಗೆದುಕೊಳ್ಳದೆ ವರ್ತಿಸಿದ್ದಾರೆ. ದೆಹಲಿ ಪೊಲೀಸರಿಂದಲೇ ಮುಖ್ಯಮಂತ್ರಿಯವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎನ್ನುವುದನ್ನು ಇವರು ಮರೆತಂತಿದೆ," ಎಂದು ಅರೋಪಿಸಿದ್ದಾರೆ.
ಅಲ್ಲದೆ, "ದೆಹಲಿ ಪೊಲೀಸರು ಗೂಂಡಾಗಳೊಂದಿಗೆ ಕೈಜೋಡಿಸಿದ್ದಾರೆ. ಏಕೆಂದರೆ, ಈ ಗೂಂಡಾಗಳು ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಅಡಳಿತಾರೂಢ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಕೇಂದ್ರ ಸರ್ಕಾರವು ಗೃಹ ಇಲಾಖೆಯ ಮುಖೇನ ದೆಹಲಿ ಪೊಲೀಸರ ಮೇಲೆ ಪೂರ್ಣ ನಿಯಂತ್ರಣವನ್ನು ಹೊಂದಿದೆ," ಎಂದು ಆರೋಪಿಸಿದ್ದಾರೆ.
ಹಾಗಾಗಿ, ಪ್ರಕರಣದ ತನಿಖೆಯನ್ನು ನಡೆಸಲು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ವಿಶೇಷ ತನಿಖಾ ದಳವೊಂದನ್ನು ರಚಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ದೆಹಲಿ ಸಿಎಂ ನಿವಾಸದ ಹೊರಗಿನ ರಕ್ಷಣೆಯ ಉಸ್ತುವಾರಿ ಹೊತ್ತ ಭದ್ರತಾ ಅಧಿಕಾರಿಗಳ ಪಾತ್ರವನ್ನೂ ತನಿಖೆಯು ಒಳಗೊಳ್ಳಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.
ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಬುಧವಾರ ಘಟನೆಯ ಕುರಿತು ಟ್ವೀಟ್ ಮಾಡಿ, "ಸಮಾಜಘಾತುಕ ಶಕ್ತಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸಿ ಸಿಸಿಟಿವಿ ಕ್ಯಾಮೆರಾಗಳನ್ನು, ಭದ್ರತಾತಡೆಯನ್ನು ಧ್ವಂಸ ಮಾಡಿದ್ದಾರೆ" ಎಂದಿದ್ದರು.