ವಂತಾರಾ ತನಿಖೆ: ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ ಎಸ್‌ಐಟಿ

ವಂತಾರಾದ ವಿರುದ್ಧ ಕೇಳಿಬಂದಿದ್ದ ಪ್ರಾಣಿಗಳ ಖರೀದಿಯಲ್ಲಿನ ಅಕ್ರಮ, ಸೆರೆಯಲ್ಲಿರಿಸಿ ದುರ್ವರ್ತನೆ ತೋರಿರುವುದು, ಹಣಕಾಸು ಮತ್ತು ಕಾರ್ಯವಿಧಾನದ ಅಕ್ರಮಗಳ ಕುರಿತ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್‌ ಎಸ್‌ಐಟಿ ರಚಿಸಿತ್ತು.
Sealed covers and supreme court
Sealed covers and supreme court
Published on

ಗುಜರಾತ್‌ನ ಜಾಮ್‌ನಗರದಲ್ಲಿರುವ ವಂತಾರಾ ವನ್ಯ ಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಕುರಿತು ಸತ್ಯಶೋಧನಾ ತನಿಖೆ ನಡೆಸಲು ನೇಮಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ [ಸಿಆರ್ ಜಯಾ ಸುಕಿನ್ ವಿರುದ್ಧ ಭಾರತ ಒಕ್ಕೂಟ].

ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವು ಎಸ್‌ಐಟಿ ತನ್ನ ವರದಿಯನ್ನು ಅನುಬಂಧಗಳು ಮತ್ತು ಪೂರಕ ಮಾಹಿತಿಗಳನ್ನು ಹೊಂದಿರುವ ಪೆನ್ ಡ್ರೈವ್‌ನೊಂದಿಗೆ ಸಲ್ಲಿಸಿದೆ ಎನ್ನುವುದನ್ನು ಗಮನಿಸಿತು. "ವರದಿಯನ್ನು ಸ್ವೀಕರಿಸಲಾಗಿದೆ ಮತ್ತು ಅಧಿಕೃತವಾಗಿ ದಾಖಲಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯವು ಸೆಪ್ಟೆಂಬರ್ 12ರ ಆದೇಶದಲ್ಲಿ ತಿಳಿಸಿದೆ.

ವಂತಾರಾ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ತನಿಖೆಗೆ ಆಗಸ್ಟ್ 25, 2025 ರಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಲಯವು ಎಸ್‌ಐಟಿಯನ್ನು ರಚಿಸಿತು. ಪ್ರಾಣಿಗಳ ಖರೀದಿಯಲ್ಲಿನ ಅಕ್ರಮವೆಸಗಿರುವುದು, ಸೆರೆಯಲ್ಲಿರಿಸಿ ದುರ್ವರ್ತನೆ ತೋರಿರುವುದು, ಹಣಕಾಸು ಮತ್ತು ಕಾರ್ಯವಿಧಾನದ ಅಕ್ರಮಗಳು ಮತ್ತು ವಂತಾರಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಶಂಕಿತ ಹಣ ವರ್ಗಾವಣೆ ಆರೋಪಗಳನ್ನು ತನಿಖೆ ಮಾಡುವ ಕಾರ್ಯವನ್ನು ತಂಡಕ್ಕೆ ವಹಿಸಲಾಗಿತ್ತು.

ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮಾಜಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಮತ್ತು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಅನೀಶ್ ಗುಪ್ತಾ ಅವರನ್ನು ಎಸ್‌ಐಟಿ ಒಳಗೊಂಡಿತ್ತು.

ವರದಿಗಳ ಪ್ರಕಾರ, ತನ್ನ ಕೆಲಸದ ಭಾಗವಾಗಿ, ಎಸ್‌ಐಟಿ ವಂತಾರಾದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲು ಮೂರು ದಿನಗಳನ್ನು ಅಲ್ಲಿ ಕಳೆದಿತ್ತು. ಹಣಕಾಸಿನ ವಹಿವಾಟುಗಳು, ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ವನ್ಯಜೀವಿ ವರ್ಗಾವಣೆ ಮಾನದಂಡಗಳ ಅನುಸರಣೆ ಮತ್ತು ಮೃಗಾಲಯ ಮತ್ತು ವಸತಿ ಮಾನದಂಡಗಳ ಅನುಸರಣೆಯ ಕುರಿತು ಮಾಹಿತಿ ಪಡೆಯಲು ವಿವರವಾದ ಪ್ರಶ್ನಾವಳಿಯನ್ನು ನೀಡಿತ್ತು.

ವಿಚಾರಣೆಗೆ ಸಹಾಯ ಮಾಡಲು ಹದಿನಾರು ಏಜೆನ್ಸಿಗಳನ್ನು ನೇಮಿಸಲಾಗಿತ್ತು. ಜಾಮ್‌ನಗರಕ್ಕೆ ಆನೆಗಳು ಮತ್ತು ಇತರ ಪ್ರಾಣಿಗಳ ವರ್ಗಾವಣೆಯನ್ನು ವಿವರಿಸಲು ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅಧಿಕಾರಿಗಳನ್ನು ಸಹ ಕರೆಸಲಾಗಿತ್ತು.

Kannada Bar & Bench
kannada.barandbench.com