ಕಾಶಿ ಗ್ಯಾನ್‌ವಪಿ ಮಸೀದಿಯ ಸಮೀಕ್ಷೆಗೆ ಪುರಾತತ್ವ ಇಲಾಖೆಗೆ ಸೂಚಿಸಿದ ವಾರಾಣಸಿ ನ್ಯಾಯಾಲಯ

ಮೊಘಲ್ ದೊರೆ ಔರಂಗಜೇಬ್ 1669ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ನೆಲಸಮ ಮಾಡಿದ್ದಾನೆ ಎಂಬ ಆರೋಪದ ಮೇಲೆ ಗ್ಯಾನ್‌ವಪಿ ಮಸೀದಿ ಇರುವ ಭೂಮಿಯನ್ನು ಹಿಂದೂಗಳಿಗೆ ಮರಳಿಸಬೇಕು ಎಂದು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿದೆ.
ಕಾಶಿ ಗ್ಯಾನ್‌ವಪಿ ಮಸೀದಿಯ ಸಮೀಕ್ಷೆಗೆ ಪುರಾತತ್ವ ಇಲಾಖೆಗೆ ಸೂಚಿಸಿದ ವಾರಾಣಸಿ ನ್ಯಾಯಾಲಯ
Published on

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಗ್ಯಾನ್‌ವಪಿ ಮಸೀದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ಒಳಪಡಿಸಲು ವಾರಾಣಸಿ ನ್ಯಾಯಾಲಯ ಅನುಮತಿ ನೀಡಿದೆ. ವಾರಾಣಸಿ ಸಿವಿಲ್ (ಹಿರಿಯ ವಿಭಾಗ) ನ್ಯಾಯಾಲಯದ ನ್ಯಾಯಾಧೀಶ ಅಶುತೋಷ್ ತಿವಾರಿ ಈ ಆದೇಶ ಜಾರಿಗೊಳಿಸಿದ್ದಾರೆ.

ಗ್ಯಾನ್‌ವಪಿ ಮಸೀದಿಯನ್ನು ನಿರ್ಮಿಸಲು ಮೊಘಲ್ ದೊರೆ ಔರಂಗಜೇಬ್ 2000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು1669ರಲ್ಲಿ ನೆಲಸಮಗೊಳಿಸಿದ ಎಂದು ಆರೋಪಿಸಿ ಗ್ಯಾನ್‌ವಪಿ ಮಸೀದಿ ಇರುವ ಭೂಮಿಯನ್ನು ಹಿಂದೂಗಳಿಗೆ ಮರಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಮೊಕದ್ದಮೆಯನ್ನು ಗ್ಯಾನ್‌ವಪಿ ಮಸೀದಿ ನಿರ್ವಹಣಾ ಸಮಿತಿ ವಿರೋಧಿಸಿತು.

ಎಎಸ್‌ಐ ಸಮೀಕ್ಷೆಗೆ ಆದೇಶಿಸುವ ನಿರ್ಧಾರ ಸಮರ್ಥಿಸಿಕೊಂಡ ನ್ಯಾಯಾಲಯ “ಫಿರ್ಯಾದಿದಾರರ ದೂರಿಗೆ ಕಾರಣವಾದ ಅಂಶ ಮತ್ತು ಪ್ರತಿವಾದಿಗಳ ಸಮರ್ಥನೆಯ ಕುರಿತಾಗಿ ಎರಡೂ ಧರ್ಮಗಳಿಗೆ ಸೇರಿದ ಭಾರತೀಯರು ಮತ್ತು ಹೊರಗಿನ ಪ್ರಜೆಗಳಿಗೆ ಈ ಕುರಿತ ಸತ್ಯ ತಿಳಿದಿದೆ... ಯಾವುದೇ ಪಕ್ಷಗಳಿಗೂ ನೇರ ಸಾಕ್ಷ್ಯಗಳ ಮೂಲಕ ವಾದ ಮಂಡಿಸಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಾಲಯದ ಮುಂದೆ ಬಂದು ಸಾಕ್ಷ್ಯ ಹೇಳಲು ಯಾವುದೇ ವ್ಯಕ್ತಿ ಜೀವಂತ ಇಲ್ಲ” ಎಂದು ಹೇಳಿದೆ.

ಮೊಘಲ್‌ ದೊರೆ ಔರಂಗಜೇಬನ ಫರ್ಮಾನಿಗೆ ಅಡಿಯಾಳುಗಳಾಗಿ ವಿಶ್ವೇಶ್ವರ ದೇಗುಲವನ್ನು ನೆಲಸಮಗೊಳಿಸಿ ಕಾಲಕ್ರಮೇಣ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ ಎಂಬ ಅಂಶವನ್ನು ಪ್ರತಿವಾದಿಗಳು ಸಂಪೂರ್ಣ ನಿರಾಕರಿಸಿದ್ದರಿಂದ ನ್ಯಾಯಾಲಯ ಸತ್ಯವನ್ನು ಕಂಡುಹಿಡಿಯಲು ಬಯಸುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

Also Read
ಗ್ಯಾನ್‌ವಪಿ ಮಸೀದಿ ಸ್ಥಳದಲ್ಲಿ ದೇಗುಲ ಮರುನಿರ್ಮಾಣ: ರಾಜ್ಯ, ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ವಾರಾಣಸಿ ನ್ಯಾಯಾಲಯ

ವಿವಾದಿತ ಸ್ಥಳದಲ್ಲಿ ಮಸೀದಿ ಇದೆ ಎಂದು ಕಂದಾಯ ದಾಖಲೆಗಳು ತೋರಿಸುತ್ತವೆ ಎಂಬ ಪ್ರತಿವಾದಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ ಇದನ್ನು ನಿರ್ಣಾಯಕವಾಗಿ ಪರಿಗಣಿಸಲಾಗದು ಎಂದಿತು. ಅಲ್ಲದೆ ಪುರಾತತ್ವ ಸರ್ವೇಕ್ಷಣೇಯ ಕುರಿತಾಗಿ ಈ ಕೆಳಗಿನ ಕೆಲ ಪ್ರಮುಖ ನಿರ್ದೇಶನಗಳನ್ನು ನೀಡಿತು:

  • ವಿವಾದಿತ ಸ್ಥಳದಲ್ಲಿ ಎಎಸ್‌ಐ ಸಮಗ್ರ ಭೌತಿಕ ಸಮೀಕ್ಷೆ ಕೈಗೊಳ್ಳಬೇಕು.

  • ಪುರಾತತ್ವ ಶಾಸ್ತ್ರದ ಬಗ್ಗೆ ಆಳವಾಗಿ ಅರಿತಿರುವ ಪ್ರಖ್ಯಾತ ವ್ಯಕ್ತಿಗಳು ಮತ್ತು ತಜ್ಞರನ್ನು ಒಳಗೊಂಡ ಐದು ಸದಸ್ಯರ ಸಮಿತಿಯನ್ನು ರಚಿಸಲಾಗುವುದು. ಅದರಲ್ಲಿ ಇಬ್ಬರು ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.

  • ಮಸೀದಿಯನ್ನು ನಿರ್ಮಿಸುವ ಅಥವಾ ನಿರ್ವಹಿಸುವ ಅಥವಾ ಸೇರ್ಪಡೆ ಮಾಡುವ ಮೊದಲು ಹಿಂದೂ ಸಮುದಾಯಕ್ಕೆ ಸೇರಿದ ದೇಗುಲ ಅಸ್ತಿತ್ವದಲ್ಲಿತ್ತೇ ಎಂಬುದನ್ನು ಸಮಿತಿ ಪತ್ತೆಹಚ್ಚಬೇಕು.

  • ಸಮೀಕ್ಷೆ ನಡೆಯುವಾಗ ವಿವಾದಿತ ಸ್ಥಳದಲ್ಲಿ ಮುಸ್ಲಿಮರ ನಮಾಜ್‌ಗೆ ಅಡ್ಡಿಯಾಗದಂತೆ ಸಮಿತಿ ನೋಡಿಕೊಳ್ಳಬೇಕು.

  • ಪ್ರಕರಣದ ಸೂಕ್ಷ್ಮತೆಯನ್ನು ಸಮಿತಿ ಅರಿತಿರಬೇಕಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಸಮಾನವಾಗಿ ಗೌರವಿಸತಕ್ಕುದು.

  • ಸಮೀಕ್ಷೆ ಕಾರ್ಯದಲ್ಲಿ ಸಾಕ್ಷಿಯಾಗಲು ಯಾವುದೇ ಸಾರ್ವಜನಿಕರಿಗೆ ಅಥವಾ ಮಾಧ್ಯಮಗಳಿಗೆ ಅವಕಾಶ ನೀಡುವಂತಿಲ್ಲ.

  • ಸಮೀಕ್ಷೆ ಪೂರ್ಣಗೊಂಡ ಕೂಡಲೇ ವರದಿಯನ್ನು ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದೆ ಸಮಿತಿ ಮೊಹರು ಮಾಡಿದ ಲಕೋಟಯಲ್ಲಿ ಸಲ್ಲಿಸಬೇಕು.

  • ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ಎಎಸ್‌ಐ ಭರಿಸಬೇಕು.

ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿಪಡಿಸಲಾಗಿದೆ. ವಿಜಯಶಂಕರ್‌ ರಾಸ್ತೋಗಿ ಎಂಬುವವರು ಸ್ವಯಂಭು ಭಗವಾನ್‌ ವಿಶ್ವೇಶ್ವರ ವಿಗ್ರಹ ಮತ್ತು ಇತರ ನಾಲ್ವರು ದೇವತೆಗಳ ವಾದ ಮಿತ್ರನಾಗಿ ಮೊಕದ್ದಮೆ ದಾಖಲಿಸಿದ್ದಾರೆ. ಮೊಕದ್ದಮೆ ಬಾಕಿ ಇರುವಾಗ ಇಬ್ಬರು ಫಿರ್ಯಾದಿದಾರರು ಸಾವನ್ನಪ್ಪಿದ್ದಾರೆ.

ವಿವಾದಿತ ಮಸೀದಿ ಮೂಲದಲ್ಲಿ ಮಸೀದಿ ಅಲ್ಲ. ಅದನ್ನು ಮಸೀದಿ ಎಂದು ಕರೆಯಲಾಗದು. ಇದು ಭಗವಾನ್‌ ವಿಶ್ವೇಶ್ವರನ ದೇಗುಲವಾಗಿದ್ದು ಅದರ ಆಕಾರದ ಹೊರತಾಗಿ ಇಂದಿಗೂ ಅದು ವಿಶ್ವೇಶ್ವರ ದೇವಳವಾಗಿದೆ” ಎಂಬುದು ಅರ್ಜಿದಾರರ ಪ್ರಮುಖ ವಾದ.

Kannada Bar & Bench
kannada.barandbench.com