ರಾಹುಲ್ ವಿರುದ್ಧ ಎಫ್ಐಆರ್: ಅರ್ಜಿ ಪರಿಗಣಿಸುವಂತೆ ವಾರಾಣಸಿ ನ್ಯಾಯಾಲಯ ಆದೇಶ

ಭಾರತದಲ್ಲಿ ಸಿಖ್ಖರೊಳಗೆ ಅಭದ್ರತೆಯ ಭಾವವಿದೆ ಎಂದು ರಾಹುಲ್ ಅಮೆರಿಕ ಭೇಟಿಯ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
Rahul Gandhi
Rahul Gandhi
Published on

ಸಿಖ್ ಸಮುದಾಯದ ದುಃಸ್ಥಿತಿ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ವಾರಾಣಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ರದ್ದುಗೊಳಿಸಿದೆ.

ನಾಗೇಶ್ವರ ಮಿಶ್ರಾ ಎಂಬುವವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಗಣನೆಗೆ ತೆಗೆದುಕೊಂಡು ಪ್ರಕರಣವನ್ನು ಹೊಸದಾಗಿ ಆಲಿಸಿ ಆದೇಶ ನೀಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.

"ನಾಗೇಶ್ವರ ಮಿಶ್ರಾ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ‌ ಪುರಸ್ಕರಿಸಲಾಗಿದೆ. ನಾಗೇಶ್ವರ ಮಿಶ್ರಾ ಮತ್ತಿತರರು ಹಾಗೂ ರಾಹುಲ್ ಗಾಂಧಿ ನಡುವಣ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಅವರು ಹೊರಡಿಸಿದ 28.11.2024ರ ಆದೇಶವನ್ನು ರದ್ದುಗೊಳಿಸಲಾಗಿದೆ. ಮರುಪರಿಶೀಲಿಸುವಂತೆ ನೀಡಲಾದ ಈ ಆದೇಶ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು, ಕಾನೂನಿನ ಪ್ರಕಾರ ಹೊಸ ಆದೇಶವನ್ನು ಹೊರಡಿಸುವಂತೆ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯ ವಿವರಿಸಿತು.

ರಾಹುಲ್ ಗಾಂಧಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದಲ್ಲಿ ಸಿಖ್ಖರೊಳಗೆ ಅಭದ್ರತೆಯ ಭಾವವಿದೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬುದಾಗಿ 2024ರಲ್ಲಿ ಮಿಶ್ರಾ ದೂರಿದ್ದರು.

ಹೇಳಿಕೆ ಪ್ರಚೋದನಕಾರಿಯಾಗಿದ್ದು ಅದು, ರಾಹುಲ್ ಗಾಂಧಿ ಅವರ ರಾಜಕೀಯ ಹಿತಾಸಕ್ತಿಗಳನ್ನು ಮುಂದುವರಿಸಲು ಜನರನ್ನು ಪ್ರಚೋದಿಸುವ ಉದ್ದೇಶ ಹೊಂದಿದೆ ಎಂದು ಅರ್ಜಿ ಆರೋಪಿಸಿತ್ತು.

ಡಿಸೆಂಬರ್ 14, 2019ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ರಾಹುಲ್ ಗಾಂಧಿ ಇದೇ ರೀತಿಯ ಹೇಳಿಕೆ ನೀಡಿದ್ದರು. ಪರಿಣಾಮ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರ ಮತ್ತು ಅರಾಜಕತೆಗೆ ಎಡೆ ಮಾಡಿಕೊಟ್ಟಿತ್ತು ಎಂದು ಮನವಿಯಲ್ಲಿ ವಾದಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 208ರಡಿ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಭಾರತದ ಹೊರಗೆ ನಡೆದ ಅಪರಾಧವನ್ನು ಭಾರತದಲ್ಲಿ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಸೆಷನ್ಸ್ ನ್ಯಾಯಾಲಯದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com