ಕಾಂಗ್ರೆಸ್ ಮಾಜಿ ನಾಯಕನ ಹತ್ಯೆ ಪ್ರಕರಣ: ಮುಖ್ತಾರ್‌ ಅನ್ಸಾರಿಗೆ ಜೀವಾವಧಿ ಶಿಕ್ಷೆ

ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ಅವರನ್ನು 1991ರ ಆಗಸ್ಟ್‌ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಧೀಶ ಅವನೀಶ್ ಗೌತಮ್ ಅವರು ಇಂದು ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಕಾಂಗ್ರೆಸ್ ಮಾಜಿ ನಾಯಕನ ಹತ್ಯೆ ಪ್ರಕರಣ: ಮುಖ್ತಾರ್‌ ಅನ್ಸಾರಿಗೆ ಜೀವಾವಧಿ ಶಿಕ್ಷೆ

ಕಾಂಗ್ರೆಸ್ ನಾಯಕರೊಬ್ಬರ ಸಹೋದರ ಅವಧೇಶ್ ರಾಯ್‌ ಎಂಬುವವರ ಹತ್ಯೆಗೆ ಸಂಬಂಧಿಸಿದಂತೆ ಪಾತಕಿ ಮತ್ತು ರಾಜಕಾರಣಿ ಮುಖ್ತಾರ್‌ ಅನ್ಸಾರಿಗೆ ವಾರಾಣಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದು ವರದಿಯಾಗಿದೆ.

ಶಾಸಕ ಅಜಯ್‌ ರಾಯ್‌ ಅವರ ಸಹೋದರ ಅವಧೇಶ್‌ ರಾಯ್‌ ಅವರನ್ನು 1991ರ ಆಗಸ್ಟ್‌ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅವನೀಶ್‌ ಗೌತಮ್‌ ಅವರು ಇಂದು ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ವರದಿಗಳ ಪ್ರಕಾರ, ಅಜಯ್  ರಾಯ್‌ ಮತ್ತು ಅವರ ಸಹೋದರ ವಾರಾಣಸಿಯ ತಮ್ಮ ಮನೆಯ ಗೇಟ್‌ನಲ್ಲಿ ಮಧ್ಯರಾತ್ರಿ 1 ಗಂಟೆ ವೇಳೆ ನಿಂತಿದ್ದರು. ಆಗ ಅನ್ಸಾರಿ ಸೇರಿದಂತೆ ದುಷ್ಕರ್ಮಿಗಳು ಕಾರಿನಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಅವಧೇಶ್‌ ಮೇಲೆ ಗುಂಡು ಹಾರಿಸಿದ್ದರು. ನಂತರ ಅವಧೇಶ್‌ ಮೃತಪಟ್ಟಿರುವುದು ಆಸ್ಪತ್ರೆಯಲ್ಲಿ ದೃಢಪಟ್ಟಿತ್ತು.

Also Read
ಅತೀಕ್ ಹತ್ಯೆ: ಮುಖ್ತಾರ್‌ಗೆ ಪೂರ್ಣ ಭದ್ರತೆ ಒದಗಿಸುವಂತೆ ಸೂಚಿಸಿದ ಅಲಾಹಾಬಾದ್ ಹೈಕೋರ್ಟ್; ಮಾಧ್ಯಮಗಳಿಗೆ ನಿರ್ಬಂಧ

ಮುಕ್ತಾರ್ ಪ್ರಸ್ತುತ ಬಾಂದಾ ಜೈಲಿನಲ್ಲಿದ್ದಾನೆ. ಪಾತಕಿ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ಗುಂಡಿಕ್ಕಿ ಕೊಂದ ವಾರಗಳ ಬಳಿಕ ಅಲಾಹಾಬಾದ್‌ ಹೈಕೋರ್ಟ್‌ ಅನ್ಸಾರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು.

ಅಪಹರಣ  ಮತ್ತು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ವರ್ಷದ ಏಪ್ರಿಲ್‌ನಲ್ಲಿ ಘಾಜಿಪುರ ನ್ಯಾಯಾಲಯ ಅನ್ಸಾರಿಯನ್ನು ದೋಷಿ ಎಂದು ಪರಿಗಣಿಸಿ ಹತ್ತು ವರ್ಷ ಜೈಲುಶಿಕ್ಷೆ ವಿಧಿಸಿತ್ತು. 1996ರಲ್ಲಿ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿ ಮತ್ತು ಕಲ್ಲಿದ್ದಲು ಉದ್ಯಮಿ ನಂದಕಿಶೋರ್ ರುಂಗ್ಟಾ ಅವರ ಅಪಹರಣ ಮತ್ತು 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಅನ್ಸಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲರ್‌ ಅವರನ್ನು ನಿಂದಿಸಿ ಪಿಸ್ತೂಲ್‌ ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಳು ವರ್ಷಗಳ ಅವಧಿಯ ಜೈಲು ಶಿಕ್ಷೆ  ವಿಧಿಸಿತ್ತು. ಅದಾದ ಕೆಲ ದಿನಗಳಲ್ಲೇ , 1999ರಲ್ಲಿ ಅನ್ಸಾರಿ ವಿರುದ್ಧ ಘೋರ ಅಪರಾಧಗಳನ್ನು ಎಸಗುವ ಗ್ಯಾಂಗ್ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಲಾಗಿತ್ತು.

Kannada Bar & Bench
kannada.barandbench.com