ಭಾರತದಲ್ಲಿ ಸಿಖ್ಖರ ಸ್ಥಿತಿಗತಿ ಕುರಿತಾದ ಹೇಳಿಕೆ: ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯ ನಕಾರ

ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಭಾರತದ ಸಿಖ್ಖರಲ್ಲಿ ಅಭದ್ರತೆಯ ಭಾವನೆಯಿದೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
Rahul Gandhi
Rahul GandhiFacebook
Published on

ಇತ್ತೀಚೆಗೆ ತಮ್ಮ ಅಮೆರಿಕ ಪ್ರವಾಸದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯನ್ನು ವಾರಾಣಸಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಭಾರತದ ಸಿಖ್ಖರಲ್ಲಿ ಅಭದ್ರತೆಯ ಭಾವನೆಯಿದೆ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ನಾಗೇಶ್ವರ ಮಿಶ್ರಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ವಾಷಿಂಗ್ಟನ್ ಡಿಸಿಯಲ್ಲಿ ಸೆಪ್ಟೆಂಬರ್ 10 ರಂದು ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, “ ಈ ಹೋರಾಟವು ಭಾರತದಲ್ಲಿ ಸಿಖ್ಖರಿಗೆ ಪೇಟವನ್ನು ಧರಿಸಲು ಅವಕಾಶವಿದೆಯೇ, ಕಡಗವನ್ನು ಧರಿಸಲು ಅನುಮತಿ ಇದೆಯೇ, ಗುರುದ್ವಾರಕ್ಕೆ ಹೋಗಲು ಸಾಧ್ಯವಿದೆಯೇ ಎಂಬುದರ ಕುರಿತಾಗಿದೆ. ಇದಕ್ಕಾಗಿಯೇ ಈ ಹೋರಾಟ, ಇದು ಎಲ್ಲ ಧರ್ಮಗಳಿಗೆ ಸಂಬಂಧಿಸಿದ ಹೋರಾಟ" ಎಂದಿದ್ದರು. ಈ ಹೇಳಿಕೆಯ ವಿರುದ್ಧ ಮಿಶ್ರಾ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೀರಜ್ ಕುಮಾರ್ ತ್ರಿಪಾಠಿಯವರು ಮನವಿಯನ್ನು ತಿರಸ್ಕರಿಸುವ ವೇಳೆ, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 208ರ ನಿಬಂಧನೆಯ ಅಡಿಯಲ್ಲಿ, ಭಾರತದ ಹೊರಗೆ ಮಾಡಿದ ಆಕ್ಷೇಪಿಸಲಾದ ಅಪರಾಧವನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಭಾರತದಲ್ಲಿ ವಿಚಾರಣೆ ನಡೆಸಲಾಗದು ಎಂದು ಹೇಳಿದರು.

ಈ ಹೇಳಿಕೆಯು ಪ್ರಚೋದನಕಾರಿಯಾಗಿದೆ ಮತ್ತು ರಾಹುಲ್‌ ಗಾಂಧಿಯವರ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಜನರನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಡಿಸೆಂಬರ್ 14, 2019 ರಂದು ಆಯೋಜಿಸಲಾಗಿದ್ದ ಸಮಾವೇಶದಲ್ಲಿಯೂ ರಾಹುಲ್‌ ಗಾಂಧಿಯವರು ಇಂತಹದ್ದೇ ಅಪಪ್ರಚಾರ ಮಾಡಿದ್ದರು. ಇದರ ಪರಿಣಾಮವಾಗಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆದು ಹಿಂಸಾಚಾರ ಮತ್ತು ಅರಾಜಕತೆಯೊಂದಿಗೆ ದುರಂತ ಅಂತ್ಯ ಕಂಡಿತು ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ಇದನ್ನು ಗಣನೆಗೆ ತೆಗೆದುಕೊಳ್ಳದ ನ್ಯಾಯಾಲಯವು, "ದೆಹಲಿಯಲ್ಲಿ ರಾಹುಲ್‌ ಗಾಂಧಿಯವರ ಭಾಷಣದ ಆಧಾರದ ಮೇಲೆ ಸಂಜ್ಞೇ ಅಪರಾಧವನ್ನು ಸೂಚಿಸುವ ಯಾವುದೇ ಘಟನೆ ನಡೆದಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿಲ್ಲ" ಎಂದಿತು. ಈ ಅವಲೋಕನಗಳೊಂದಿಗೆ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com