ಕಾಶಿ ವಿಶ್ವನಾಥ- ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವ ಮೂಲಕ 'ಧಾರ್ಮಿಕ ಭಾವನೆಗಳನ್ನು' ಘಾಸಿಗೊಳಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಎಐಎಂಐಎಂ ನೇತಾರ ಅಸಾದುದ್ದೀನ್ ಒವೈಸಿ ಅವರ ವಿರುದ್ಧಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ .
ಇಬ್ಬರು ನಾಯಕರ ವಿರುದ್ಧ ಎಫ್‌ಐಆರ್ ಕೋರಿ ವಕೀಲ ಹರಿಶಂಕರ್ ಪಾಂಡೆ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸೆಷನ್ಸ್ ನ್ಯಾಯಾಧೀಶ ವಿನೋದ್ ಕುಮಾರ್ ತಿರಸ್ಕರಿಸಿದರು.
ಪಾಂಡೆ ಸಲ್ಲಿಸಿದ್ದ ಮನವಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಫೆಬ್ರವರಿ 2023ರಲ್ಲಿ ವಜಾಗೊಳಿಸಿತ್ತು. ಮನವಿಯಲ್ಲಿ ಆರೋಪಿಸಿದಂತೆ ನಾಯಕರ ವಿರುದ್ಧ ಯಾವುದೇ ಸಂಜ್ಞೇಯ ಅಪರಾಧದ ಪುರಾವೆಗಳು ಕಂಡು ಬಂದಿಲ್ಲ ಎಂದು ಆಗ ಅದು ಹೇಳಿತ್ತು. ಹೀಗಾಗಿ ಪಾಂಡೆ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಶಿವಲಿಂಗವೆಂದು ಹೇಳಲಾಗುವ ಜ್ಞಾನವಾಪಿ ಮಸೀದಿಯೊಳಗೆ ದೊರೆತ ವಸ್ತುವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಧಾರ್ಮಿಕ ಭಾವನೆ ಘಾಸಿಗೊಳಿಸುವ ಮೂಲಕ ಇಬ್ಬರೂ ನಾಯಕರು ವಾರಾಣಸಿಯ ವಾತಾವರಣ ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಪಾಂಡೆ ದೂರಿದ್ದರು.
ಸುಪ್ರೀಂ ಕೋರ್ಟ್ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡದೆ ಇದ್ದರೂ ಈ ನಾಯಕರು ಮತಕ್ಕಾಗಿ ಜನರ ಭಾವನೆ ಕೆರಳಿಸಲು ಯತ್ನಿಸಿದ್ದರು. ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಅವರು ಧಕ್ಕೆ ತಂದಿದ್ದಾರೆ ಎಂದು ಪಾಂಡೆ ಆಪಾದಿಸಿದ್ದರು.