ಕ್ರಾಂತಿಕಾರಿ ಕವಿ, ಸಾಮಾಜಿಕ ಹೋರಾಟಗಾರ ಡಾ. ವರವರ ರಾವ್ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ಸಂವಿಧಾನದ 226ನೇ ವಿಧಿ ಅನ್ವಯ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದು ಜೈಲಿನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡಲು ಸರ್ಕಾರ ವಿಫಲವಾದ ಕಾರಣ ತಮ್ಮ ಪತಿಯನ್ನು ಬಿಡುಗಡೆ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದ ಸುಪ್ರೀಂಕೋರ್ಟ್ ಆದಷ್ಟು ಬೇಗನೆ ಜಾಮೀನು ಅರ್ಜಿಯ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚನೆ ನೀಡಿತ್ತು. ಸೆ 17ರಿಂದಲೂ ಜಾಮೀನು ಅರ್ಜಿಯ ವಿಚಾರಣೆ ನಡೆದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿತ್ತು. ಸಂವಿಧಾನದ 226ನೇ ವಿಧಿಯನ್ವಯ ಸಲ್ಲಿಸಲಾಗಿರುವ ಹೊಸ ಅರ್ಜಿಯಲ್ಲಿ, ತಮ್ಮ ಪತಿಗೆ ಸರ್ಕಾರದಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಸಂವಿಧಾನದ 21ನೇ ವಿಧಿಯನ್ವಯ ಆರೋಗ್ಯ, ಘನತೆ ಹಾಗೂ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ರಾವ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಕೋರಲಾಗಿದೆ. ಅಲ್ಲದೆ ಅವರಿಗೆ ಚಿಕಿತ್ಸೆ ದೊರಕಿಸಲು ಅನುವಾಗುವಂತೆ ಹೈಕೋರ್ಟ್ ಷರತ್ತುಗಳನ್ನು ನಿಗದಿಗೊಳಿಸಬೇಕೆಂದು ಮನವಿ ಮಾಡಿದ್ದು, ಜೊತೆಗೆ ಪರಿಹಾರಧನಕ್ಕೂ ಮೊರೆಯಿಡಲಾಗಿದೆ.
ವಕೀಲ ಆರ್.ಸತ್ಯನಾರಾಯಣ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ರಾವ್ ಅವರ ಅನಾರೋಗ್ಯದ ಹೊರತಾಗಿಯೂ, ತಲೋಜಾ ಜೈಲಿನಲ್ಲಿ ಬಂಧಿಸಿಟ್ಟಿರುವುದು ಕ್ರೌರ್ಯದಿಂದ ಕೂಡಿದೆ ಎಂದು ವಾದಿಸಲಾಗಿದೆ. ಪ್ರಸ್ತುತ ಅವರನ್ನು ಅಪಮಾನಕರ ಮತ್ತು ಅಮಾನವೀಯ ರೀತಿಯಲ್ಲಿ ಬಂಧಿಸಿಡಲಾಗಿದೆ. ಅವರಿಗೆ ವೈದ್ಯಕೀಯ ನೆರವು ನಿರಾಕರಿಸುವುದು 21ನೇ ವಿಧಿ ಅನ್ವಯ ಒದಗಿಸಲಾದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸರ್ಕಾರದ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ರಾವ್ ಬಂಧನದಲ್ಲಿರುವಾಗಲೇ ಪ್ರಾಣ ಕಳೆದುಕೊಳ್ಳುವ ಆತಂಕ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
"ತಲೋಜಾ ಜೈಲಿನಲ್ಲಿ ಬಂಧಿಸಿದಾಗಿನಿಂದಲೂ ಅವರು ಡೈಪರ್ ಮತ್ತು ಮೂತ್ರ ಚೀಲದೊಂದಿಗೆ ಹಾಸಿಗೆ ಹಿಡಿದಿದ್ದು ಇಬ್ಬರು ಸಹ ಆರೋಪಿಗಳನ್ನು ದಿನದ 24 ಗಂಟೆಗಳ ಕಾಲ ಅವರನ್ನು ನೋಡಿಕೊಳ್ಳಲು ನೇಮಿಸಲಾಗಿದೆ. ಅವರು ಗಾಲಿಕುರ್ಚಿಯಲ್ಲಿ ಮಾತ್ರ ಚಲಿಸಬಲ್ಲವರಾಗಿದ್ದು ಹೆಚ್ಚು ಕಾಲ ಹಾಸಿಗೆಯ ಮೇಲೆ ದಿನದೂಡುತ್ತಿದ್ದಾರೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
80ರ ಹರೆಯದ ರಾವ್ ಅವರಿಗೆ ವೈದ್ಯಕೀಯ ನೆರವು ನೀಡುವಲ್ಲಿ ಸರ್ಕಾರದ ಪಾತ್ರವನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಸ್ಥಿತಿಯಲ್ಲಿ ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರ ಬಂಧನ ಯಾವ ಉದ್ದೇಶವನ್ನೂ ಪೂರೈಸದು. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಲಾಗಿದೆ. 80ರ ಹರೆಯದ ರಾವ್ ಅವರಿಗೆ ವೈದ್ಯಕೀಯ ನೆರವು ನೀಡುವಲ್ಲಿ ಸರ್ಕಾರದ ಪಾತ್ರದ ಬಗ್ಗೆಯೂ ಈ ಮನವಿಯಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿವೆ, ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಕ್ಷೀಣಿಸುತ್ತಿದೆ ಎಂದು ಹೇಳಲಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾದ ವರವರ ರಾವ್ ಮತ್ತು ಸಹ ಆರೋಪಿ ಡಾ.ಶೋಮಾ ಸೇನ್ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು.
2018ರ ಜೂನ್‌ನಿಂದ ಅವರು ಸೆರೆವಾಸ ಅನುಭವಿಸುತ್ತಿದ್ದಾರೆ. ನ್ಯಾಯಮೂರ್ತಿಗಳಾದ ಎ ಕೆ ಮೆನನ್ ಮತ್ತು ಎಸ್ ಪಿ ತಾವಡೆ ಅವರಿರುವ ರಜಾಕಾಲದ ನ್ಯಾಯಪೀಠ, ರಾವ್ ಅವರು ಸಲ್ಲಿಸಿದ್ದ ಹಿಂದಿನ ಜಾಮೀನು ಅರ್ಜಿಯ ಜೊತೆಗೆ ಪ್ರಸಕ್ತ ಅರ್ಜಿಯನ್ನು ಗುರುವಾರ ಮಧ್ಯಾಹ್ನ ವಿಚಾರಣೆ ನಡೆಸಲಿದೆ. ರಾವ್ ಪರವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಜರಾಗಲಿದ್ದಾರೆ.