“ಆಮ್ಲಜನಕದ ಕೊರತೆಯಿಂದ ಜನ ಸಾಯುತ್ತಿದ್ದಾರೆ; ವೇದಾಂತ ಘಟಕದಲ್ಲಿ ಆಮ್ಲಜನಕ ಏಕೆ ತಯಾರು ಮಾಡಲಾಗದು?” ಸುಪ್ರೀಂ ಪ್ರಶ್ನೆ

“ನಮಗೆ ಆ ಘಟಕವನ್ನು ವೇದಾಂತ ನಡೆಸುತ್ತದೆಯೋ, ಮತ್ತೊಂದು ಸಂಸ್ಥೆ ನಡೆಸುತ್ತದೆಯೋ ಎನ್ನುವುದರ ಬಗ್ಗೆ ಆಸಕ್ತಿ ಇಲ್ಲ. ಆಮ್ಲಜನಕದ ಉತ್ಪಾದನೆ ಖಾತರಿಪಡಿಸಿಕೊಳ್ಳುವುದು ನಮ್ಮ ಆಸಕ್ತಿ,” ಎಂದು ಸುಪ್ರೀಂ ಕೋರ್ಟ್‌
Vedanta and Oxygen
Vedanta and Oxygen
Published on

ಕಾನೂನು ಮತ್ತು ಸುವ್ಯವಸ್ಥೆಯ ಕಾರಣದಿಂದ ವೇದಾಂತ ಆಮ್ಲಜನಕ ಘಟಕವನ್ನು ಮರು ಆರಂಭಿಸಲಾಗದು ಎನ್ನುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಅಕ್ಷೇಪ ವ್ಯಕ್ತಪಡಿಸಿತು.

“ಒಂದು ವೇಳೆ ವೇದಾಂತ ಸಂಸ್ಥೆಯು ಘಟಕವನ್ನು ನಡೆಸಲು ಸಾಧ್ಯವಿಲ್ಲ ಎಂದರೆ ತಮಿಳುನಾಡು ಸರ್ಕಾರವು ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಡೆಸುವ ಮೂಲಕ ಕೋವಿಡ್‌ನ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಆಮ್ಲಜನಕವನ್ನು ಉತ್ಪಾದಿಸಬೇಕು,” ಎಂದು ಸಿಜೆಐ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ಹೇಳಿತು.

ಇದಕ್ಕೂ ಮೊದಲು ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಸ್‌ ವೈದ್ಯನಾಥನ್‌, “ಆಮ್ಲಜನಕ ಘಟಕವನ್ನು ಮರು ಆರಂಭಿಸುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ. 2018ರ ಘಟನಾವಳಿಗಳನ್ನು ಮರುಕಳಿಸಲು ನಮಗೆ ಇಷ್ಟವಿಲ್ಲ,” ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠವು, “ಆಮ್ಲಜನಕವನ್ನು ಉತ್ಪಾದಿಸುವ ನಿಮ್ಮ ಜವಾಬ್ದಾರಿಯನ್ನು ನೀವೇಕೆ ಈಡೇರಿಸಬಾರದು? ವೇದಾಂತದೊಂದಿಗೆ ನಿಮಗೆ ಸಮಸ್ಯೆ ಇದೆ ಎಂದಾಕ್ಷಣ ನೀವು ಆಮ್ಲಜಕವನ್ನು ಉತ್ಪಾದಿಸಬಾರದೇ? ಇದ್ಯಾವ ರೀತಿಯ ವಾದ? ನಮಗೆ ಘಟಕವನ್ನು ವೇದಾಂತ ನಡೆಸುತ್ತದೆಯೋ, ಮತ್ತೊಬ್ಬರು ನಡೆಸುತ್ತಾರೋ ಎನ್ನುವುದು ಮುಖ್ಯವಲ್ಲ. ಆಮ್ಲಜನಕವನ್ನು ಖಾತರಿಪಡಿಸುವ ಬಗ್ಗೆ ನಮ್ಮ ಗಮನವಿದೆ. ಇದು ವೇದಾಂತದ ಪ್ರಶ್ನೆಯಲ್ಲ. ಜನ ಸಾಯುತ್ತಿದ್ದಾರೆ. ನೀವು ಆಮ್ಲಜಕವನ್ನು ಉತ್ಪಾದಿಸುವುದು ಸಾಧ್ಯವಿದೆ,” ಎಂದಿತು.

Also Read
ಮನೆ ಬಾಗಿಲಿಗೆ ಲಸಿಕೆ ಪೂರೈಕೆ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದ ಬಾಂಬೆ ಹೈಕೋರ್ಟ್‌

ನ್ಯಾಯಾಲಯದ ಈ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರವು ಸಹ ಸಮ್ಮತಿಸಿತು. ತಮಿಳುನಾಡು ಆಮ್ಲಜನಕವನ್ನು ಅಧಿಕವಾಗಿ ಉತ್ಪಾದಿಸುವ ರಾಜ್ಯವಾಗಿದ್ದು, ಹಾಗಾಗಿ ಘಟಕವನ್ನು ಆರಂಭಿಸುವ ಅಗತ್ಯವಿಲ್ಲ ಎನ್ನುವ ಹಿರಿಯ ವಕೀಲ ಕೊಲಿನ್‌ ಗೊನ್ಸಾಲ್ವೆನ್ಸ್‌ ಅವರ ವಾದವನ್ನು ಸಹ ಸಿಜೆಐ ಒಪ್ಪಲಿಲ್ಲ.ಈ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬೊಬ್ಡೆ ಅವರು, ಇತರೆ ರಾಜ್ಯಗಳಿಗೆ ಆಮ್ಲಜನಕದ ಅಗತ್ಯವಿದೆ. ದೇಶದಲ್ಲಿನ ಸಂಪನ್ಮೂಲವನ್ನು ಸಮವಾಗಿ ಹಂಚಿಕೊಳ್ಳಬೇಕಿದೆ. ಇದು ಸಂವಿಧಾನದ ರಾಜ್ಯಗಳ ನೀತಿಯಡಿ ಬರುವ ನಿರ್ದೇಶಕ ತತ್ವವಾಗಿದೆ ಎಂದರು.

ಅಂತಿಮವಾಗಿ ತಮಿಳುನಾಡು ಪರ ವಕೀಲರಾದ ವೈದ್ಯನಾಥನ್‌ ಅವರು ಘಟಕವನ್ನು ಪುನರಾರಂಭಿಸುವ ಕುರಿತಾಗಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು. ಇದಕ್ಕೆ ಒಪ್ಪಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com