

ಕಾಡುಗಳ್ಳ ವೀರಪ್ಪನ್ ಹಿಡಿಯಲು ನೇಮಕವಾಗಿದ್ದ ವಿಶೇಷ ಕಾರ್ಯಾಚರಣಾ ಪಡೆ (ಎಸ್‌ಟಿಎಫ್) ಭಾಗವಾಗಿದ್ದ 72 ಮಂದಿಗೆ ಬಹುಮಾನದ ಮೊತ್ತವನ್ನು ಮೂರು ತಿಂಗಳಲ್ಲಿ ಪಾವತಿಸುವಂತೆ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
2005ರ ಜುಲೈ 8ರ ಸರ್ಕಾರಿ ಆದೇಶದ ಪ್ರಕಾರ ಫಲಾನುಭವಿಗಳಿಗೆ ಬಹುಮಾನ ವಿತರಿಸುವಂತೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ಏಪ್ರಿಲ್ 21ರಂದು ಸರ್ಕಾರಕ್ಕೆ ಆದೇಶಿಸಿದೆ.
ನಿವೃತ್ತ ಅರಣ್ಯ ರಕ್ಷಕರು, ವಾಚರ್, ಡ್ರೈವರ್, ಉಪ ಅರಣ್ಯ ಸಂರಕ್ಷಕರು, ಸಹಾಯಕ ಅರಣ್ಯ ರಕ್ಷಕರು, ಕ್ಷೇತ್ರ ಅರಣ್ಯ ರಕ್ಷಕರು ಎಸ್‌ಟಿಎಫ್ ಭಾಗವಾಗಿ ವೀರಪ್ಪನ್ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. 2004ರ ಅಕ್ಟೋಬರ್ 18ರಂದು ವೀರಪ್ಪನ್ ಅನ್ನು ಹತ್ಯೆ ಮಾಡಲಾಗಿತ್ತು.
“ಈಗಾಗಲೇ ಪರಿಹಾರ ಪಡೆದಿರುವವರಂತೆಯೇ ಅರ್ಜಿದಾರರು ಬಹುಮಾನಕ್ಕೆ ಅರ್ಹರಾಗಿದ್ದಾರೆ. ಇವರಿಗೆ ಬಹುಮಾನದ ಮೊತ್ತ ನಿರಾಕರಿಸುವುದು ಈಗಾಗಲೇ ನ್ಯಾಯಾಂಗದ ಮಧ್ಯಸ್ಥಿಕೆಯಿಂದ ಸರಿಪಡಿಸಲ್ಪಟ್ಟಿರುವ ಅಕ್ರಮವನ್ನು ಶಾಶ್ವತಗೊಳಿಸಿದಂತಾಗಲಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ನ್ಯಾಯಾಲಯವು ಈಗಾಗಲೇ ಪ್ರಕರಣವನ್ನು ನಿರ್ಧರಿಸಿ ಪರಿಹಾರ ದೊರಕಿಸಿರುವುದರಿಂದ ಸರ್ಕಾರ ಮತ್ತು ಅದರ ಸಕ್ಷಮ ಪ್ರಾಧಿಕಾರಗಳು ಇಂಥದ್ದೇ ಪರಿಸ್ಥಿತಿಯಲ್ಲಿರುವವರಿಗೆ ಮತ್ತೆ ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗುವುದಕ್ಕೆ ಆಸ್ಪದ ನೀಡದೇ ಸೌಲಭ್ಯ ವಿಸ್ತರಿಸುವುದು ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ” ಎಂದು ಪೀಠ ಹೇಳಿದೆ.
2024ರ ಆಗಸ್ಟ್ 12ರ ಸಮನ್ವಯ ಪೀಠದ ತೀರ್ಪಿನ ಪ್ರಕಾರ ಪರಿಹಾರ ಪಡೆದಿರುವವರು ಮತ್ತು ಹಾಲಿ ಅರ್ಜಿದಾರರ ನಡುವೆ ತಾರತಮ್ಯ ಮಾಡಲಾಗದು. ಈ ಹಿಂದೆ ಸಮನ್ವಯ ಪೀಠವು 17 ಮಂದಿಗೆ ಪರಿಹಾರ ಬಿಡುಗಡೆ ಮಾಡಲು ಆದೇಶಿಸಿತ್ತು ಎಂದು ಹೈಕೋರ್ಟ್ ಹೇಳಿದೆ.
ಹಲವು ವರ್ಷಗಳ ಕಾಲ ವೀರಪ್ಪನ್ ಸೆದೆ ಬಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೂ ಬಹುಮಾನದ ಮೊತ್ತವನ್ನು ಕೆಲವೇ ಸಿಬ್ಬಂದಿಗೆ ಸೀಮಿತಗೊಳಿಸಿದ್ದ ರಾಜ್ಯ ಸರ್ಕಾರದ ನಿಲುವನ್ನು ಈ ಹಿಂದೆ ನ್ಯಾಯಾಲಯವು ಕಟುವಾಗಿ ಟೀಕಿಸಿತ್ತು. “ನೀಡಿರುವ ಮಾತನ್ನು ಉಳಿಸಿಕೊಳ್ಳಬೇಕೆ ವಿನಾ ಅದನ್ನು ಮುರಿಯಬಾರದು. ಅದರಲ್ಲೂ ಸಾರ್ವಭೌಮ ರಾಜ್ಯವು ನೀಡುವ ವಾಗ್ದಾನಕ್ಕೆ ತನ್ನದೇ ಆದ ಮಹತ್ವ ಇರುತ್ತದೆ” ಎಂದು ಪೀಠ ಕಟುವಾಗಿ ಹೇಳಿತ್ತು.
ವೀರಪ್ಪನ್‌ನನ್ನು ಒಂದು ದಿನದಲ್ಲಿ ಕೆಲವೇ ಕೆಲವು ಸಿಬ್ಬಂದಿ ಹತ್ಯೆ ಮಾಡಿಲ್ಲ. ಇದಕ್ಕೂ ಮುನ್ನ ಹಲವು ಸಿಬ್ಬಂದಿ ತಮ್ಮ ಜೀವನವನ್ನು ಪಣಕ್ಕಿಟ್ಟು ಮಾಹಿತಿ ಸಂಗ್ರಹಿಸಿ, ಕಾರ್ಯಚಾರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
2005ರ ಜನವರಿ 24ರಂದು ಪೊಲೀಸ್ ಮಹಾನಿರ್ದೇಶಕರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಬಹುಮಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. 2005ರ ಜುಲೈ 8ರಂದು ಇದನ್ನು ಸರ್ಕಾರ ಒಪ್ಪಿಕೊಂಡಿತ್ತು.
ಇದರ ಭಾಗವಾಗಿ ರೂಪಿಸಿದ ಯೋಜನೆಯ ಪ್ರಕಾರ ಎಸ್‌ಟಿಎಫ್‌ನಲ್ಲಿ ಮೂರು ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿದವರಿಗೆ ₹3 ಲಕ್ಷ; ಎರಡು ಅಥವಾ ಮೂರು ವರ್ಷದೊಳಗೆ ಕೆಲಸ ಮಾಡಿದವರಿಗೆ ₹2 ಲಕ್ಷ ಮತ್ತು ಒಂದು ಅಥವಾ ಎರಡು ವರ್ಷದಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ₹1 ಹಾಗೂ ಒಂದು ವರ್ಷದ ಕೆಳಗೆ ಕೆಲಸ ಮಾಡಿದ ಸಿಬ್ಬಂದಿಗೆ ₹50,000 ನೀಡಲಾಗುವುದು ಎಂದು ಘೋಷಿಸಲಾಗಿತ್ತು.
ಅಲ್ಲದೇ ಇನ್‌ಸ್ಪೆಕ್ಟರ್ ಶ್ರೇಣಿಗಿಂತ ಕೆಳಗಿನವರಿಗೆ 30x40 ನಿವೇಶನ, ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೆ 40x60 ನಿವೇಶನಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೆಲ್ಲದರ ನಡುವೆ ಪ್ರಧಾನ ಮುಖ್ಯ ಅರಣ್ಯ ರಕ್ಷಣಾಧಿಕಾರಿಯು 259 ಅರ್ಹ ಅರಣ್ಯ ಸಿಬ್ಬಂದಿ, ಅವರ ಪದನಾಮ, ಸೇವಾ ಸ್ಥಳ ಮತ್ತು ಎಸ್‌ಟಿಎಫ್‌ನಲ್ಲಿ ಅವರ ಸೇವೆಯ ಮಾಹಿತಿಯನ್ನು ಒದಗಿಸಿದ್ದರು.
ಇದೆಲ್ಲದರ ಮಧ್ಯೆ, ಬಹುಮಾನದ ಮೊತ್ತ ಖಾಲಿಯಾಗಿರುವುದರಿಂದ ರಾಜ್ಯ ಸರ್ಕಾರವು ವೀರಪ್ಪನ್ ಕೊಲೆಯಾದ ದಿನ ಸ್ಥಳದಲ್ಲಿದ್ದ ಆರು ಮಂದಿ ಎಸ್‌ಟಿಎಫ್ ಸಿಬ್ಬಂದಿ ಮಾತ್ರ ಬಹುಮಾನದ ಮೊತ್ತವನ್ನು ನೀಡಲಾಗುವುದು ಎಂದು ಹೇಳಿತ್ತು. ಈ ವಾದವನ್ನು ತಿರಸ್ಕರಿಸಿದ್ದ ಹೈಕೋರ್ಟ್, ಸರ್ಕಾರದ ವಾದವು ತಾರತಮ್ಯದಿಂದ ಕೂಡಿದ ಅಸೂಕ್ಷ್ಮ ನಿರ್ಧಾರ ಎಂದು ಜರಿದಿತ್ತು.