ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಕೆಲವೇ ಕೆಲವು ಪದವೀಧರರು ವ್ಯಾಜ್ಯ ಅಥವಾ ಸಾರ್ವಜನಿಕ ದಾವೆ ಕ್ಷೇತ್ರ ಆಯ್ದುಕೊಳ್ಳುತ್ತಾರೆ. ಇದು ದೇಶದ ಪ್ರಧಾನ ಕಾನೂನು ಶಾಲೆಗಳಲ್ಲಿ ದೊರೆಯುವ ಶಿಕ್ಷಣದ ನಿರಾಶಾದಾಯಕ ಫಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಬೇಸರ ವ್ಯಕ್ತಪಡಿಸಿದರು.
ಹೈದರಾಬಾದ್‌ನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿಯ (NALSAR) ಹದಿನೆಂಟನೇ ವಾರ್ಷಿಕ ಘಟಿಕೋತ್ಸವ ಉದ್ದೇಶಿಸಿ ಅವರು ಮಾತನಾಡಿದರು.
"ಹೆಚ್ಚು ಪ್ರಾಯೋಗಿಕವಾದ ಮತ್ತು ವಿದ್ಯಾರ್ಥಿಗಳು ತಳಮಟ್ಟದಲ್ಲಿ ಜನರ ಹಾಗೂ ಅವರ ಸಮಸ್ಯೆಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವಂತಹ ಕೋರ್ಸ್‌ಗಳನ್ನು ಪರಿಚಯಿಸುವ ತುರ್ತು ಅವಶ್ಯಕತೆಯಿದೆ. ಇದು ಇಂದಿನ ಕಾನೂನು ಶಿಕ್ಷಣದಲ್ಲಿ ನಾನು ಕಂಡುಕೊಂಡ ನಿರಾಶಾದಾಯಕ ಫಲಿತಾಂಶಗಳಲ್ಲಿ ಒಂದು. ಜಿಲ್ಲಾ ಮಟ್ಟದಲ್ಲಿ ಪ್ರಾಕ್ಟೀಸ್ ಮಾಡುವುದಿರಲಿ, ರಾಷ್ಟ್ರೀಯ ಕಾನೂನು ಶಾಲೆಗಳಿಂದ ಪದವಿ ಪಡೆದ ಕೆಲವೇ ವಿದ್ಯಾರ್ಥಿಗಳು ವ್ಯಾಜ್ಯ ಕ್ಷೇತ್ರ ಸೇರಲು ಅಥವಾ ಸಾರ್ವಜನಿಕ ದಾವೆಗಳನ್ನು ತೆಗೆದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ,”ಎಂದರು.
"ವಿಚಾರಣಾ ವಕೀಲಿಕೆಯಲ್ಲಿ ಯಶಸ್ವಿಯಾಗಲು, ಮನಸ್ಸಿನ ಉಪಸ್ಥಿತಿ ಮತ್ತು ಬೌದ್ಧಿಕ ಒಳಹರಿವಿನ ಅವಶ್ಯಕತೆ ಅಪಾರವಾಗಿರುವ ಪ್ರತ್ಯೇಕ ಕೌಶಲ್ಯ ಅಗತ್ಯವಿರುತ್ತದೆ, ಮೇಲಾಗಿ, ವಿಚಾರಣಾ ನ್ಯಾಯಾಲಯಗಳ ಮುಂದೆ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ಬಾಕಿ ಇರುವುದನ್ನು ಗಮನಿಸಿದಾಗ ವಿಶೇಷ ತರಬೇತಿ ಪಡೆದ ವಕೀಲರ ಬೇಡಿಕೆ ಮತ್ತು ಅಗತ್ಯ ಎರಡೂ ಇರುತ್ತದೆ" ಎಂದು ಅವರು ಹೇಳಿದರು.
ಆದ್ದರಿಂದ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಂತಹ ಉನ್ನತ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುವ ಮೊದಲು ವಿಚಾರಣಾ ನ್ಯಾಯಾಲಯದ ಮಟ್ಟದಲ್ಲಿ ಅನುಭವ ಪಡೆಯುವುದನ್ನು ಯುವ ವಕೀಲರು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಬಾಡಿಗೆ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಹಶೀಲ್ದಾರ್ ಅವರ ಎದುರು ಹಾಜರಾಗುವ ಮೂಲಕ ತಮ್ಮ ವೃತ್ತಿಬದುಕು ಆರಂಭವಾಗಿದ್ದನ್ನು ಅವರು ಈ ಸಂದರ್ಭದಲ್ಲಿ ನೆನೆದರು. "ಅಂದಿನಿಂದ, ನಾನು ತೆರಿಗೆ ಅಧಿಕಾರಿಗಳು, ಸ್ಟಾಂಪ್ ರಿಜಿಸ್ಟ್ರಾರ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮುನ್ಸಿಫ್ ನ್ಯಾಯಾಲಯ, ಇತ್ಯಾದಿಗಳ ಮುಂದೆ ಹಾಜರಾಗಿದ್ದೇನೆ. ಜಡ್ಜ್ ನೇಮಿಸಿದ ಕಮಿಷನರ್ ಆಗಿ ನನ್ನ ಮೊದಲ ನಿಯುಕ್ತಿಯನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಕಮಿಷನರ್ ಆಗಿ ಕೆಲಸ ಮಾಡಿದ್ದಕ್ಕಾಗಿ ನನಗೆ 100 ರೂಪಾಯಿ ಪಾವತಿಸಲಾಯಿತು. ಈ ಪ್ರಯತ್ನಗಳಿಂದ ನಾನು ಗಳಿಸಿದ ಅನುಭವವು, ವ್ಯವಸ್ಥೆ ಮತ್ತು ಜನರ ಬಗ್ಗೆ ನನ್ನ ತಿಳಿವಳಿಕೆಯನ್ನು ವೃದ್ಧಿಸಿತು ಎಂಬುದನ್ನು ನಾನು ಹೇಳಲೇಬೇಕು. ಇಂತಹ ಅನುಭವವನ್ನು ಯಾವುದೇ ವಿಶ್ವವಿದ್ಯಾಲಯ ನಿಮಗೆ ಕಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ ಕಾನೂನು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ಸಂಗತಿ ಎಲ್ಲಿಂದಲೇ ಬಂದರೂ ಅದರ ಮುಖಬೆಲೆಯ ಕಾರಣದಿಂದಲೇ ಸ್ವೀಕರಿಸಬಾರದು, ಪರಿಶೀಲಿಸಬೇಕು” ಎಂದು ಅವರು ಕಿವಿಮಾತು ಹೇಳಿದರು. ಅಲ್ಲದೆ ಯುವ ಜನತೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು ಅವುಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.
ಸಿಜೆಐ ಭಾಷಣದ ಪೂರ್ಣ ಪಠ್ಯವನ್ನು ಇಲ್ಲಿ ಓದಿ: