Delhi High Court
Delhi High Court

ʼಇಂಡಿಯಾ ಬರ್ನಿಂಗ್ʼ ದೇಶದ ಜಾತ್ಯತೀತತೆಯನ್ನು ಋಣಾತ್ಮಕವಾಗಿ ಚಿತ್ರಿಸುತ್ತದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರ

ಸಾಕ್ಷ್ಯಚಿತ್ರದ ನಿರ್ಮಾಪಕ ಅಂಗದ್ ಸಿಂಗ್ ಅವರು ತಮ್ಮ ವೀಸಾ ಅರ್ಜಿಯಲ್ಲಿ ವಾಸ್ತವಾಂಶಗಳನ್ನು ತಿರುಚಿದ್ದು ದೇಶವನ್ನು ದೂಷಿಸಲು ಅವರು ರಾಷ್ಟ್ರ ವಿರೋಧಿ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಎಫ್ಆರ್‌ಆರ್‌ಒ ಹೇಳಿದೆ.

ವೈಸ್ ನ್ಯೂಸ್ ಪತ್ರಕರ್ತ ಅಂಗದ್ ಸಿಂಗ್ ಅವರನ್ನು ಭಾರತದಿಂದ ಗಡೀಪಾರು ಮಾಡಲಾಗಿದ್ದು ದೇಶದ ಜಾತ್ಯತೀತತೆಯನ್ನು ಋಣಾತ್ಮಕವಾಗಿ ಚಿತ್ರಿಸಿರುವ ಕಾರಣ ಅವರ ʼಇಂಡಿಯಾ ಬರ್ನಿಂಗ್‌ʼ ಸಾಕ್ಷ್ಯಚಿತ್ರವನ್ನು  ಕಪ್ಪುಪಟ್ಟಿಗೆ ಸೇರಿಸಲಾಗಿದೆ  ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಸಲ್ಲಿಸಿದ ಅಫಿಡವಿಟ್‌ನಲ್ಲಿ “ಅಂಗದ್ ಸಿಂಗ್ ಅವರು ತಮ್ಮ ವೀಸಾ ಅರ್ಜಿಯಲ್ಲಿ ವಾಸ್ತವಾಂಶಗಳನ್ನು ತಿರುಚಿದ್ದು ದೇಶವನ್ನು ದೂಷಿಸಲು ರಾಷ್ಟ್ರ ವಿರೋಧಿ ಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ದೂರಲಾಗಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಆದೇಶದ ಮೇರೆಗೆ ಸಿಂಗ್ ಅವರನ್ನು ಗ್ರೇಡ್ ಎ ಅಡಿಯಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಅದು ಹೇಳಿದೆ.

ಪ್ರತಿಷ್ಠಿತ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಸಾಕ್ಷ್ಯಚಿತ್ರ ನಿರ್ಮಾಪಕ ಸಿಂಗ್ ಅಮೆರಿಕ ಪ್ರಜೆಯಾಗಿದ್ದು, ಭಾರತದ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್ ಪಡೆದಿದ್ದಾರೆ. ಅವರನ್ನು ಕಳೆದ ಆಗಸ್ಟ್ 2022ರಲ್ಲಿ ನ್ಯೂಯಾರ್ಕ್‌ಗೆ ಗಡೀಪಾರು ಮಾಡಲಾಗಿದೆ.

“ಪಂಜಾಬ್‌ನಲ್ಲಿರುವ ತಮ್ಮ ಕುಟುಂಬವನ್ನು ಭೇಟಿಯಾಗಲು ಭಾರತಕ್ಕೆ ಬಂದ ಅವರನ್ನು ಗಡೀಪಾರು ಮಾಡಲಾಯಿತು. ಹಾಗೆ ಗಡೀಪಾರು ಮಾಡಲು ಕಾರಣ ಅವರ ಪತ್ರಿಕಾ ವೃತ್ತಿ” ಎಂದು ಅವರ ತಾಯಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಪತ್ರಕರ್ತರ ವೀಸಾದಲ್ಲಿ ಹಲವಾರು ಬಾರಿ ಭಾರತಕ್ಕೆ ಪ್ರಯಾಣಿಸಿದ್ದರೂ, ಆಗಸ್ಟ್ 2022ರಲ್ಲಿ,  ಪಂಜಾಬ್‌ನಲ್ಲಿರುವ ತಮ್ಮ ಕುಟುಂಬ ಭೇಟಿಯಾಗಲು ಮುಂದಾದಾಗ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂಬುದು ಅವರ ವಾದವಾಗಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರ ಮುಂದೆ ಶುಕ್ರವಾರ ಪ್ರಕರಣ ವಿಚಾರಣೆಗೆ ಬಂದಾಗ, ಅಂಗದ್‌ ಅವರ ಪರವಾಗಿ ವಕೀಲೆ ಸ್ವಾತಿ ಸುಕುಮಾರ್ ವಾದ ಮಂಡಿಸಿದರು. ಓಸಿಐ ಕಾರ್ಡುದಾರರಾಗಿರುವ ತಮ್ಮ ಕಕ್ಷಿದಾರರು, ಪೌರತ್ವ ಕಾಯಿದೆಯ 7ಬಿ (2) ಸೆಕ್ಷನ್‌ನಲ್ಲಿ ನಿರ್ದಿಷ್ಟಪಡಿಸಿದ ಕೆಲ ಹಕ್ಕುಗಳನ್ನು ಹೊರತುಪಡಿಸಿ, ದೇಶದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಎಲ್ಲಾ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ.

ಅಂಗದ್‌ ಅವರ ಒಸಿಐ ಕಾರ್ಡ್ ರದ್ದುಪಡಿಸಲಾಗಿದೆ ಎಂದು ಸರ್ಕಾರ  ಹೇಳುತ್ತಿಲ್ಲ. ಕಾರ್ಡುದಾರರ ವಾದ ಆಲಿಸದೆ ಒಸಿಐ ಕಾರ್ಡುಗಳನ್ನು ರದ್ದುಗೊಳಿಸುವಂತಿಲ್ಲ ಎಂದು ಕಾಯಿದೆಯ ಸೆಕ್ಷನ್‌  7ಡಿ ಹೇಳುತ್ತದೆ. ಆದರೆ ಅವರಿಗೆ ಯಾವುದೇ ಕಾರಣ ತಿಳಿಸಿಲ್ಲ. ಜೊತೆಗೆ ಕಾರ್ಡ್‌ ಇನ್ನೂ ಮಾನ್ಯತೆ ಕಳೆದುಕೊಂಡಿಲ್ಲ ಎಂದು ಸ್ವಾತಿ ಅವರು ವಾದ ಮಂಡಿಸಿದರು.

ಇತ್ತ ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜೆಸ್‌ಸಿ) ಅನುರಾಗ್‌ ಅಹ್ಲುವಾಲಿಯಾ ಅವರು “ ವಿದೇಶಿಗರ ಕಾಯಿದೆ- 1947 ಮತ್ತು ವಿದೇಶಿಯರ ಆದೇಶ- 1948ರ ಪ್ರಕಾರ ಕೇಂದ್ರ ಅನುಮತಿ ಇಲ್ಲದೆ ಯಾವುದೇ ವಿದೇಶಿ ಚಲನಚಿತ್ರ ನಿರ್ಮಿಸುವಂತಿಲ್ಲ ಅಥವಾ ಸಾರ್ವಜನಿಕ ಪ್ರದರ್ಶನ ಏರ್ಪಡಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸಿಂಗ್‌ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು.

ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತೆ ಎಂದು ನ್ಯಾಯಾಲಯ ಅಹ್ಲುವಾಲಿಯಾ ಅವರನ್ನು ಕೇಳಿದಾಗ, ಈ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ಪಡೆದು ತಿಳಿಸುವುದಾಗಿ ವಕೀಲರು ಹೇಳಿದರು. ನಂತರ ನ್ಯಾಯಾಲಯ ಪ್ರಕರಣವನ್ನು ಫೆಬ್ರವರಿ 28ಕ್ಕೆ ಮುಂದೂಡಿತು.

Kannada Bar & Bench
kannada.barandbench.com