ಸಂತ್ರಸ್ತರ ಪರಿಹಾರ ಯೋಜನೆ: ಕೆಎಸ್‌ಎಲ್‌ಎಸ್‌ಎಗೆ ರೂ. 5 ಕೋಟಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು

ಎರಡು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಪೀಠಕ್ಕೆ ತಿಳಿಸಿದ ಕೆಎಸ್‌ಎಲ್‌ಎಸ್‌ಎ ವಕೀಲೆ ನಿಧಿಶ್ರೀ ವೇಣುಗೋಪಾಲ್‌.
Karnataka High Court
Karnataka High Court

‘ಸಂತ್ರಸ್ತರ ಪರಿಹಾರ ಯೋಜನೆ’ ಜಾರಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಇದೇ ಜನವರಿ 24ರೊಳಗೆ ಐದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಇಲ್ಲವಾದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ಆದೇಶಿಸಿದೆ.

ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ಪೀಪಲ್ಸ್ ಮೂವ್‌ಮೆಂಟ್ ಅಗೈನ್ಸ್ಟ್ ಸೆಕ್ಷ್ಯುಯಲ್ ಅಸಾಲ್ಟ್’ (ಪಿಎಂಎಎಸ್‌ಎ) ಎಂಬ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸಂತ್ರಸ್ತ ಪರಿಹಾರ ಯೋಜನೆಯ ಸಮರ್ಪಕ ಜಾರಿಗಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ 2020ರ ಫೆಬ್ರವರಿ 19ರಂದು ನ್ಯಾಯಾಲಯ ನೀಡಿರುವ ಆದೇಶ ಪಾಲನೆಯಾಗಿದೆಯೇ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು.

ಇದಕ್ಕೆ ಕೆಎಸ್‌ಎಲ್‌ಎಸ್‌ಎ ಪ್ರತಿನಿಧಿಸಿದ್ದ ವಕೀಲೆ ನಿಧಿಶ್ರೀ ವೇಣುಗೋಪಾಲ್‌ ಅವರು “ಈವರೆಗೂ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ” ಎಂದು ತಿಳಿಸಿದರು. ಸರ್ಕಾರದ ಪರ ವಕೀಲರು, ಈ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಕೋರಿದರು.

ಆ ಮನವಿಗೆ ಒಪ್ಪಿದ ಪೀಠವು 2020ರ ಫೆಬ್ರವರಿ 19ರ ಆದೇಶದಂತೆ ಹಣ ಬಿಡುಗಡೆ ಮಾಡಲು ಜನವರಿ 24ರವರಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿತು. ಅಲ್ಲದೆ, ನ್ಯಾಯಾಲಯದ ಆದೇಶದಂತೆ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ವಿಚಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿತು.

ಸಂತ್ರಸ್ತ ಪರಿಹಾರ ಯೋಜನೆ ಅಡಿಯಲ್ಲಿ 2020-21ನೇ ಸಾಲಿನಲ್ಲಿ ಪರಿಹಾರ ವಿತರಿಸಲು ರೂ. 20 ಕೋಟಿ ಅಗತ್ಯವಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಪ್ರಾಧಿಕಾರಕ್ಕೆ ಅಗತ್ಯವಿರುವ ಹಣದಲ್ಲಿ ನಾಲ್ಕನೇ ಒಂದು ಭಾಗದ (5 ಕೋಟಿ ರೂಪಾಯಿ) ಹಣವನ್ನು 2020ರ ಮಾರ್ಚ್‌ 31ರೊಳಗೆ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com