ಅಪರಾಧ ಪ್ರಕ್ರಿಯೆಯ ಪ್ರತಿ ಹಂತದಲ್ಲಿ ಪಾಲ್ಗೊಳ್ಳಲು ಸಂತ್ರಸ್ತರಿಗೆ ಹಕ್ಕಿದೆ: ಲಖೀಂಪುರ್‌ ಖೇರಿ ಆದೇಶದಲ್ಲಿ ಸುಪ್ರೀಂ

ವಿಚಾರಣೆಯ ಹಂತದಿಂದ ಮೇಲ್ಮನವಿ ಅಥವಾ ಮರುಪರಿಶೀಲನಾ ಪ್ರಕ್ರಿಯೆಯ ಅಂತ್ಯದವರೆಗೆ ಅಡೆತಡೆ ಇಲ್ಲದೆ ಭಾಗವಹಿಸುವ ಹಕ್ಕು ಸಂತ್ರಸ್ತರಿಗೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪರಾಧ ಪ್ರಕ್ರಿಯೆಯ ಪ್ರತಿ ಹಂತದಲ್ಲಿ ಪಾಲ್ಗೊಳ್ಳಲು ಸಂತ್ರಸ್ತರಿಗೆ ಹಕ್ಕಿದೆ: ಲಖೀಂಪುರ್‌ ಖೇರಿ ಆದೇಶದಲ್ಲಿ ಸುಪ್ರೀಂ
ramesh sogemane

ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ನೀಡಲಾದ ಜಾಮೀನನ್ನು ಸೋಮವಾರ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಂತ್ರಸ್ತರು ಭಾಗವಹಿಸುವಾಗ ಅವರು ವಿಚಾರಣೆ ಆರಂಭವಾಗುವವರೆಗೆ ಕಾಯುವ ಅಗತ್ಯವಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ [ಜಗಜೀತ್ ಸಿಂಗ್ ಮತ್ತು ಆಶಿಶ್ ಮಿಶ್ರಾ ನಡುವಣ ಪ್ರಕರಣ].

ಅಪರಾಧದ ಸಂತ್ರಸ್ತರಿಗೆ ತನಿಖೆಯ ಹಂತದಿಂದ ಹಿಡಿದು ಮೇಲ್ಮನವಿ ಅಥವಾ ಮರುಪರಿಶೀಲನಾ ಪ್ರಕ್ರಿಯೆಯ ಅಂತ್ಯದವರೆಗೆ ಪ್ರತಿ ಹಂತದಲ್ಲೂ ಭಾಗವಹಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿದೆ.

"ಕ್ರಿಮಿನಲ್ ಪ್ರೊಸೀಜರ್ ಕೋಡ್ ನ (ಸಿಆರ್‌ಪಿಸಿ) ಅರ್ಥದಲ್ಲಿ 'ಸಂತ್ರಸ್ತ' ವಿಚಾರಣೆಯಲ್ಲಿ ಭಾಗವಹಿಸುವ ತನ್ನ ಹಕ್ಕನ್ನು ಪ್ರತಿಪಾದಿಸುವುದಕ್ಕಾಗಿ ವಿಚಾರಣೆಯ ಆರಂಭದವರೆಗೆ ಕಾಯಲು ಹೇಳಲಾಗುವುದಿಲ್ಲ. ಅಪರಾಧ ಸಂಭವಿಸಿದ ನಂತರ ಪ್ರತಿ ಹಂತದಲ್ಲಿಯೂ ಭಾಗವಹಿಸುವ ಕಾನೂನುಬದ್ಧ ಹಕ್ಕು ಅವರಿಗೆ ಇದೆ. ಅಂತಹ 'ಸಂತ್ರಸ್ತ' ತನಿಖೆಯ ಹಂತದಿಂದ ಮೇಲ್ಮನವಿ ಅಥವಾ ಮರುಪರಿಶೀಲನಾ ಪ್ರಕ್ರಿಯೆಯ ಅಂತ್ಯದವರೆಗೆ ಅಡೆತಡೆ ಇಲ್ಲದೆ ಭಾಗವಹಿಸುವ ಹಕ್ಕುಗಳನ್ನು ಹೊಂದಿರುತ್ತಾರೆ" ಎಂದು ತೀರ್ಪು ಹೇಳಿದೆ.

Also Read
ಲಖೀಂಪುರ್ ಖೇರಿ: ಆಶಿಶ್ ಮಿಶ್ರಾಗೆ ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಮೃತರ ಕುಟುಂಬದ ಸದಸ್ಯರಿಗೆ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಪರಿಣಾಮಕಾರಿ ವಿಚಾರಣೆಯ ಅವಕಾಶ ನಿರಾಕರಿಸಲಾಗಿದೆ ಎಂಬ ಅಂಶವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌ ಪ್ರಸ್ತುತ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸುವಂತೆ ಅಲಾಹಾಬಾದ್‌ ಹೈಕೋರ್ಟ್‌ಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ ಕುಟುಂಬ ಸದಸ್ಯರಿಗೆ ಪ್ರತಿ ಹಂತದಲ್ಲೂ ವಿಚಾರಣೆ ಆಲಿಸಲು ಕಾನೂನುಬದ್ಧವಾಗಿ ಸ್ಥಾಪಿತವಾದ ಹಕ್ಕಿದೆ ಎಂದು ಪೀಠ ತಿಳಿಸಿತು.

ಹೈಕೋರ್ಟ್ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ನಿರಾಶೆ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಸಂತ್ರಸ್ತರು ವಿಚಾರಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಮರು ವಿಚಾರಣೆಗೆ ಅರ್ಜಿ ಸಲ್ಲಿಸಲಾಗಿದೆ. ಇದರರ್ಥ ಜಾಮೀನು ನೀಡುವ ಸಮಯದಲ್ಲಿ ಸಂತ್ರಸ್ತರಿಗೆ ನ್ಯಾಯಯುತ ಮತ್ತು ಪರಿಣಾಮಕಾರಿ ವಿಚಾರಣೆಯನ್ನು ನಿರಾಕರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜಾಮೀನು ನೀಡುವ ಸಂಬಂಧ ಹೈಕೋರ್ಟ್‌ಗಳು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 439 ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವಾಗ ಪಾಲಿಸಬೇಕಾದ ಅಂಶಗಳನ್ನು ನ್ಯಾಯಾಲಯ ವಿವರಿಸಿತು:

ಜಾಮೀನು ಅರ್ಜಿ ಇತ್ಯರ್ಥಪಡಿಸುವಾಗ ನ್ಯಾಯಾಲಯವು, ಇದು ಆರಂಭಿಕ ಹಂತವಾಗಿರುವುದರಿಂದ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯದ ವಿವರವಾದ ಮೌಲ್ಯಮಾಪನ ಮಾಡುವುದರಿಂದ ಅಥವಾ ಅದನ್ನು ಕೈಗೆತ್ತಿಕೊಳ್ಳುವುದರಿಂದ ದೂರ ಉಳಿಯಬೇಕು.

ಆರೋಪಿ ಕೃತ್ಯ ಎಸಗಿದ್ದಾನೆಯೇ ಅಥವಾ ಅಪರಾಧದ ತೀವ್ರವಾದುದೇ ಎಂಬ ಸೂಕ್ತ ಕಾರಣಗಳನ್ನು ಒಳಗೊಂಡು ನ್ಯಾಯಾಲಯವೊಂದು ಜಾಮೀನು ನೀಡಲು ಅಗತ್ಯವಾದ ಪ್ರಾಥಮಿಕ ಸಂಗತಿಗಳನ್ನು ಪರಿಶೀಲಿಸಬಹುದೇ ಹೊರತು ಪ್ರಾಸಿಕ್ಯೂಷನ್ ಅಥವಾ ಡಿಫೆನ್ಸ್‌ ವಾದಕ್ಕೆ ಪೂರ್ವಾಗ್ರಹ ಉಂಟುಮಾಡುವ ಸಾಧಾರ ಸಂಗತಿಗಳ ವ್ಯಾಪಕವಾದ ಪರಿಗಣನೆಗೆ ಮುಂದಾಗಬಾರದು ಎಂದು ಪೀಠ ವಿವರಿಸಿದೆ.

Related Stories

No stories found.
Kannada Bar & Bench
kannada.barandbench.com