ಸುದೀರ್ಘ ಅವಧಿಯ ಶಿಕ್ಷೆ ಅನುಭವಿಸಿರುವ ಅಪರಾಧಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅವರ ಅಪರಾಧ ಕೃತ್ಯದಿಂದ ಸಂತ್ರಸ್ತರ ಮೇಲಾದ ದೈಹಿಕ, ಸಾಮಾಜಿಕ ಹಾಗೂ ಮಾನಸಿಕ ಪರಿಣಾಮಗಳನ್ನು ವಿವರಿಸುವ 'ಸಂತ್ರಸ್ತರ ಮೇಲಿನ ಪರಿಣಾಮ ಮೌಲ್ಯಮಾಪನ ವರದಿ'ಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯವು ಸುಪ್ರೀಂಕೋರ್ಟ್‌ಗೆ ಸಲಹೆ ನೀಡಿದೆ.
ಜೈಲಿನಲ್ಲಿರುವ ಆರೋಪಿಗಳು ನಿಜವಾದ ಶಿಕ್ಷೆ ಅಥವಾ ಸುದೀರ್ಘ ಅವಧಿಯ ಬಂಧನವನ್ನು ಪೂರೈಸಿರುವ ಪ್ರಕರಣಗಳಲ್ಲಿ, ಜಾಮೀನು ನೀಡುವುದು ಪ್ರಕರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಲು ಸಂತ್ರಸ್ತರೊಂದಿಗೆ ಸಮಾಲೋಚಿಸಿ ಸಂತ್ರಸ್ತರ ಪರಿಣಾಮ ಮೌಲ್ಯಮಾಪನ ವರದಿ ತಯಾರಿಸಬಹುದು ಎಂದು ಅಲಾಹಾಬಾದ್ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ್ದು, ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲಹೆ ನೀಡಿದೆ.
"ಅಪರಾಧಿಗೆ ಜಾಮೀನು ನೀಡುವ ಮೊದಲು ಸಂತ್ರಸ್ತರು ಮತ್ತು ಅವರ ಕುಟುಂಬದ ಹಕ್ಕುಗಳನ್ನು ಪರಿಗಣಿಸಬೇಕು. ಅಲ್ಲದೆ ಸಿಆರ್‌ಪಿಸಿ ಸೆಕ್ಷನ್ 436 ಎ ಅಡಿ ಅರ್ಧ ಶಿಕ್ಷೆ ಅನುಭವಿಸಿರುವ ಮತ್ತು ಆರೋಪಿ ಜೈಲಿನಲ್ಲಿರುವ ಸಂದರ್ಭದಲ್ಲಿ ಅಂತಹ ಕ್ರಿಮಿನಲ್ ಮೇಲ್ಮನವಿಗಳನ್ನು ಆಲಿಸಲು ಆದ್ಯತೆ ನೀಡಬೇಕು” ಎಂದು ಸುಪ್ರೀಂಕೋರ್ಟ್‌ಗೆ ಹೈಕೋರ್ಟ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಜೀವಾವಧಿ ಶಿಕ್ಷೆಯನ್ನು ʼಇಡೀ ಬದುಕಿಗೆʼ ಪರಿಗಣಿಸಬೇಕು ಮತ್ತು ಹೀನ ಕೃತ್ಯ ಎಸಗಿದ ಆರೋಪಿಯನ್ನು 10 ರಿಂದ 15 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಿದರೆ ಅವನು ಎಂದಿಗೂ ತನ್ನ ಮನವಿಯ ಶೀಘ್ರ ಇತ್ಯರ್ಥಕ್ಕೆ ಯತ್ನಿಸುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ಅನುಸಾರವಾಗಿ ಹೈಕೋರ್ಟ್ ಪ್ರಮುಖ ಸಲಹೆ ನೀಡಿದೆ.
ದೀರ್ಘಾವಧಿಯ ಬಾಕಿ ಇರುವ ಕ್ರಿಮಿನಲ್ ಮೇಲ್ಮನವಿಗಳಲ್ಲಿ ಜಾಮೀನು ನೀಡಲು ಪರಿಗಣಿಸಬಹುದಾದ ವಿಸ್ತೃತ ಮಾನದಂಡಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಅಲಾಹಾಬಾದ್ ಹೈಕೋರ್ಟ್ ಅಫಿಡವಿಟ್ ಸಲ್ಲಿಸಿತ್ತು.
"ಹಲವು ವರ್ಷಗಳಿಂದ ಮನವಿಗಳನ್ನು ಆಲಿಸದಿರುವ ಕಾರಣಕ್ಕಾಗಿ ನಾವು ಕೆಲವು ಮಾದರಿಗಳನ್ನು ಹಾಕಲು ಬಯಸುತ್ತೇವೆ. ಜನರು ಇಷ್ಟು ದಿನ ಬಂಧನದಲ್ಲಿರಲು ಸಾಧ್ಯವಿಲ್ಲ." ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ತಿಳಿಸಿದೆ.
ಉತ್ತರ ಪ್ರದೇಶ ಹೆಚ್ಚುವರಿ ಅಡ್ವೋಕೇಟ್ ಜನರಲ್ ಗರೀಮಾ ಪ್ರಶಾದ್ ಅವರು ರಾಜ್ಯ ಸ್ಥಾಯಿ ವಕೀಲ ವಿಷ್ಣು ಶಂಕರ್ ಜೈನ್ ಅವರೊಂದಿಗೆ ಸಮಾಲೋಚಿಸಿ ನೀಡಿದ ಸಲಹೆಗಳನ್ನು ಪರಿಗಣಿಸಿದ ನಂತರ ಹೈಕೋರ್ಟ್ ಈ ಸಲಹೆಗಳನ್ನು ನೀಡಿದೆ.
ಸಂತ್ರಸ್ತರಿಗೆ ಅಪಾಯವನ್ನು ಉಂಟುಮಾಡುವ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಬಾಕಿ ಇರುವ ಕ್ರಿಮಿನಲ್ ಮೇಲ್ಮನವಿಗಳಲ್ಲಿ ಜಾಮೀನು ಮಂಜೂರು ಮಾಡುವುದನ್ನು ಪರಿಗಣಿಸಲು ಅಪರಾಧಿ "ಒಂದು ಪ್ರದೇಶದಲ್ಲಿ ಉಳಿಯಲು" ಅಥವಾ "ಕೆಲವು ಪ್ರದೇಶಗಳಿಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲು" ಕೆಲ ಷರತ್ತುಗಳನ್ನು ವಿಧಿಸಬೇಕು ಎಂದು ಅದು ಹೇಳಿದೆ.
ಇಂತಹ ದೀರ್ಘಾವಧಿಯ ಬಾಕಿ ಇರುವ ಕ್ರಿಮಿನಲ್ ಮೇಲ್ಮನವಿಗಳನ್ನು ನಿರ್ಧರಿಸಲು ವಿಶೇಷ ಪೀಠಗಳನ್ನು ಸ್ಥಾಪಿಸದೆ, ಆರೋಪಿಗಳಿಗೆ "ಯಾಂತ್ರಿಕ ರೀತಿಯಲ್ಲಿ" ಜಾಮೀನು ನೀಡಬಾರದು ಎಂದು ಸೂಚಿಸಲಾಗಿದೆ.
ವೈಟ್ ಕಾಲರ್ ಅಪರಾಧ ಎಸಗಿದ ಆರೋಪಿಗಳು ಅತ್ಯಾಧುನಿಕ ರೀತಿಯ್ಲಲಿ ಅಪರಾಧ ಎಸಗುವ ರೂಢಿಗತ ಮತ್ತು ಕಠೋರ ಅಪರಾಧಿಗಳಾಗಿರುವುದರಿಂದ ಜಾಮೀನು ನೀಡಲು ʼಭಿನ್ನ ಮಾನದಂಡಗಳನ್ನು ರೂಪಿಸಬೇಕು ಎಂದು ಸಹ ಹೈಕೋರ್ಟ್ ಹೇಳಿದೆ.
ಈ ಹಿಂದೆ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಟಿಪ್ಪಣಿಯಲ್ಲಿ, ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಉತ್ತರ ಪ್ರದೇಶ ಸರ್ಕಾರವು ಎರಡು ವಿಶಾಲ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿತ್ತು:
- ನಿಜವಾದ ಜೈಲುವಾಸದ ಒಟ್ಟು ಅವಧಿ
- ಕ್ರಿಮಿನಲ್ ಮನವಿಯ ಬಾಕಿ ಇರುವ ಅವಧಿ.
ಈ ಮೇಲಿನ ವರ್ಗಗಳಲ್ಲಿ, ಈ ಕೆಳಗಿನ ಪರಿಗಣನೆಗಳನ್ನು ಜಾಮೀನಿಗಾಗಿ ಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ:
- ಅಪರಾಧದ ಘೋರ ಸ್ವರೂಪ
- ಹಿಂದಿನ ನಡವಳಿಕೆ ಮತ್ತು ಅಪರಾಧ ಇತಿಹಾಸ
- ಮನವಿಯನ್ನು ಮುಂದುವರಿಸುವಲ್ಲಿ ಉದ್ದೇಶಪೂರ್ವಕ ವಿಳಂಬ
- ಮನವಿದಾರರು/ಅಪರಾಧಿ ಮೊದಲ ಹಂತದಲ್ಲಿ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು