ಅತ್ಯಾಚಾರ ಆರೋಪಿಯೊಬ್ಬರಿಗೆ ಇತ್ತೀಚೆಗೆ ಜಾಮೀನು ಮಂಜೂರು ಮಾಡಿರುವ ಧಾರವಾಡ ಹೈಕೋರ್ಟ್ ಪೀಠವು, ಸಂತ್ರಸ್ತ ಮಹಿಳೆಯು ಆರೋಪಿಗೆ ಬೆಳಗಿನ ಜಾವದ ವೇಳೆ ವಿಡಿಯೊ ಕರೆ ಮಾಡುತ್ತಿದ್ದುದನ್ನು ಪರಿಗಣಿಸಿ, ಆಕೆಯು ಆರೋಪಿಯೊಂದಿಗೆ ಸಮ್ಮತ ಲೈಂಗಿಕ ಸಂಬಂಧವನ್ನು ಹೊಂದಿರುವ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡಿದೆ.
ವಿವಾಹಿತೆಯಾಗಿರುವ ಸಂತ್ರಸ್ತೆಯು ಬೆಳಗಿನ ಜಾವ ಆರೋಪಿಗೆ ವಿಡಿಯೊ ಕರೆ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಸಂತ್ರಸ್ತೆಯ ಖಾಸಗಿ ಅಂಗಾಂಗಗಳ ಚಿತ್ರಗಳನ್ನು ಅರೋಪಿ ಸೆರೆ ಹಿಡಿದಿದ್ದಾನೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಅತ್ಯಾಚಾರ ಆರೋಪಿಗೆ ಜಾಮೀನು ನೀಡುವ ವೇಳೆ ಅಭಿಪ್ರಾಯಪಟ್ಟಿತು.
ಕೊಪ್ಪಳ ಜಿಲ್ಲೆಯ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್‌ನಲ್ಲಿ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ಬಸನಗೌಡ ಅಲಿಯಾಸ್ ಬಸವರಾಜ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ನೇತೃತ್ವದ ಏಕಸದಸ್ಯ ಪೀಠವು ಈಚೆಗೆ ವಿಚಾರಣೆ ನಡೆಸಿತು.
ಒಂದು ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ನೀಡಬೇಕು. ಸಾಕ್ಷ್ಯಗಳನ್ನು ನಾಶ ಮಾಡಬಾರದು. ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು ವಿಧಿಸಿತು.
“ಸಂತ್ರಸ್ತೆಯು ದೂರಿನಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಿದರೆ ಸಂತ್ರಸ್ತೆ ಮತ್ತು ಅರ್ಜಿದಾರರ ನಡುವೆ ಆಕೆಯ ವಿವಾಹಕ್ಕೂ ಮುನ್ನ ಪ್ರೇಮ ಸಂಬಂಧವಿತ್ತು ಎಂಬುದು ತಿಳಿಯುತ್ತದೆ. ಒಪ್ಪಿಗೆಯ ಮೇಲೆ ಸಂತ್ರಸ್ತೆ ಮತ್ತು ಅರ್ಜಿದಾರ ಹಲವು ಬಾರಿ ಸಂಭೋಗ ನಡೆಸಿದ್ದಾರೆ. ವಿವಾಹದ ಬಳಿಕವೂ ಸಂತ್ರಸ್ತೆ ಮತ್ತು ಅರ್ಜಿದಾರರ ನಡುವೆ ಸಂಬಂಧ ಮುಂದುವರಿದಿದೆ. ಸಂತ್ರಸ್ತೆಯು ವಿಡಿಯೊ ಕರೆಯಲ್ಲಿ ಖಾಸಗಿ ಅಂಗಾಂಗಗಳನ್ನು ತೋರಿಸುವಾಗ ಆರೋಪಿಯು ಅವುಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ. ಬೆಳಗಿನ ಜಾವ 4ರಿಂದ 5 ಗಂಟೆ ವೇಳೆಗೆ ಸಂತ್ರಸ್ತೆಯು ಅರ್ಜಿದಾರನಿಗೆ ಪತಿಯ ಮೊಬೈಲ್‌ನಿಂದ ವಿಡಿಯೊ ಕರೆ ಮಾಡುತ್ತಿದ್ದುದು ಆಕೆಗೆ ಸಮ್ಮತಿ ಇರುವುದನ್ನು ತಿಳಿಸುತ್ತದೆ. ಅರ್ಜಿದಾರರ ಬೆದರಿಕೆ ಹಿನ್ನೆಲೆಯಲ್ಲಿ ಸಂತ್ರಸ್ತೆ ಒಪ್ಪಿಗೆ ನೀಡಿದ್ದಾಳೆಯೋ, ಇಲ್ಲವೋ ಎಂಬುದು ವಿಚಾರಣೆಯಿಂದಷ್ಟೇ ತಿಳಿಯಲಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲ ಅನ್ವರ್ ಬಾಷಾ ಅವರು ವಾದಿಸಿದ್ದರು. ಸಂತ್ರಸ್ತೆಯನ್ನು ಪ್ರತಿನಿಧಿಸಿದ್ದ ಹೈಕೋರ್ಟ್ ಸರ್ಕಾರಿ ವಕೀಲ ರಮೇಶ್ ಚಿಗರಿ ಅವರು “ಹೀನ ಕೃತ್ಯ ಎಸಗಲಾಗಿದ್ದು, ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಪ್ರಕರಣವಿದೆ ಎಂಬುದು ಆರೋಪ ಪಟ್ಟಿಯಿಂದ ತಿಳಿಯುತ್ತದೆ. ಆತನಿಗೆ ಜಾಮೀನು ಮಂಜೂರು ಮಾಡಿದರೆ ದೂರುದಾರೆಗೆ ಬೆದರಿಕೆ ಹಾಕುವ ಸಾಧ್ಯತೆ ಇದ್ದು, ಸಾಕ್ಷ್ಯ ನಾಶ ಮಾಡಬಹುದು” ಎಂದು ಜಾಮೀನಿಗೆ ವಿರೋಧಿಸಿದ್ದರು.
ಆರೋಪಿಯ ಕ್ರಿಮಿನಲ್ ಹಿನ್ನೆಲೆ ಪರಿಶೀಲಿಸಿದ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಜೀವಾವಧಿ ಶಿಕ್ಷೆಯ ಆರೋಪಗಳಿಲ್ಲ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಮೂರು ವರ್ಷಗಳ ಗರಿಷ್ಠ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದಿದೆ.
ಸಂತ್ರಸ್ತೆ ಮತ್ತು ಆರೋಪಿ ಒಂದೇ ಊರಿನವರಾಗಿದ್ದು, ಆಕೆ ವಿವಾಹವಾಗುವುದಕ್ಕೂ ಮುನ್ನ ಮತ್ತು ಆನಂತರವೂ ಲೈಂಗಿಕ ಸಂಬಂಧ ಹೊಂದಿದ್ದರು. ಆರೋಪಿ ಹಾಗೂ ಸಂತ್ರಸ್ತೆಯು ನಡುವೆ ಬೆಳಗಿನ ಜಾವ 4ರಿಂದ 5 ಗಂಟೆ ವೇಳೆಗೆ ವಿಡಿಯೊ ಕರೆಗಳ ವಿನಿಮಯವಾಗುತ್ತಿತ್ತು. ಸಂತ್ರಸ್ತೆಯು ತನ್ನ ಖಾಸಗಿ ಅಂಗಗಳನ್ನು ತೋರಿದಾಗ ಅವುಗಳನ್ನು ಆರೋಪಿ ಸೆರೆ ಹಿಡಿಯುತ್ತಿದ್ದ. ಸಂತ್ರಸ್ತೆಯು 15 ದಿನ ಆರೋಪಿಗೆ ಕರೆ ಮಾಡದಿದ್ದಾಗ ಸಂತ್ರಸ್ತೆಯ ಖಾಸಗಿ ಚಿತ್ರಗಳನ್ನು ಆಕೆಯ ಪತಿಯ ಮೊಬೈಲ್‌ಗೆ ಆರೋಪಿಯು ಕಳುಹಿಸಿದ್ದ. ಇದನ್ನು ಆಧರಿಸಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354ಸಿ (ನಗ್ನ ಚಿತ್ರಗಳ ವೀಕ್ಷಣೆ), 506 (ಕ್ರಿಮಿನಲ್ ಬೆದರಿಕೆ), 376 (ಅತ್ಯಾಚಾರ), 450 (ಅಕ್ರಮ ಮನೆ ಪ್ರವೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ರ (ವಿದ್ಯುನ್ಮಾನ ಮಾದರಿಯಲ್ಲಿ ಆಕ್ಷೇಪಾರ್ಹವಾದ ಚಿತ್ರ ರವಾನೆ) ಪ್ರಕರಣ ದಾಖಲಿಸಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪೊಲೀಸರು ಬಂಧಿಸಿದ್ದರು.