ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವಿಡಿಯೋ ನಕಲಿ: ಸುಪ್ರೀಂ ಕೋರ್ಟ್‌ಗೆ ಎನ್‌ಟಿಎ ಅಫಿಡವಿಟ್
ಮೇ 5ರಂದು ನಡೆದ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪದವಿ ಪರೀಕ್ಷೆಗೂ ಒಂದು ದಿನ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಪ್ರಧಾನ ಸಾಕ್ಷ್ಯ ತಿರುಚಿದ್ದಾಗಿದ್ದು ಪರೀಕ್ಷೆಯ ದಿನಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಅನಿಸಿಕೆ ಮೂಡಿಸಲು ಸೃಷ್ಟಿಸಲಾಗಿದೆ ಎಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಟಿಎ) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ಛಾಯಾಚಿತ್ರದ ಟೈಂಸ್ಟಾಂಪನ್ನು (ಕಾಲದ ದಾಖಲೆ) ತಿರುಚಲಾಗಿದೆ ಎಂದು ಎನ್‌ಟಿಎ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಟೆಲಿಗ್ರಾಂ ಚಾನೆಲ್‌ನ ಸದಸ್ಯರು ವಿಡಿಯೋ ನಕಲಿ ಎಂದು ಗುರುತಿಸಿದ್ದಾರೆ. ಪರೀಕ್ಷಾ ದಿನಕ್ಕೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಬಿಂಬಿಸಲು ಹೀಗೆ ತಿರುಚಲಾಗಿದೆ. ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿನ ಹೇಳಿಕೆಗಳು ಮತ್ತು ಚರ್ಚೆಗಳ ವಿಡಿಯೋ ಕೂಡ ತಿರುಚಲಾಗಿದ್ದು ಮೇ 4 ರಂದು ಸೋರಿಕೆಯಾಗಿದೆ ಎಂದು ಬಿಂಬಿಸಲು ದಿನಾಂಕವನ್ನು ಉದ್ದೇಶಪೂರ್ವಕವಾಗಿ ಮಾರ್ಪಡಿಸಲಾಗಿದೆ ಎಂದು ಎನ್‌ಟಿಎ ಪ್ರತಿಕ್ರಿಯಿಸಿದೆ.
ಅಕ್ರಮ ನಡೆದಿದೆ ಎನ್ನಲಾದ 153 ಪ್ರಕರಣಗಳನ್ನು ವರದಿ ಮಾಡಲಾಗಿದ್ದು ಅಕ್ರಮ ತಡೆ ಸಮಿತಿ 81 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲು ಮತ್ತು 54 ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡಲು ಶಿಫಾರಸು ಮಾಡಿದೆ ಎಂದು ಎನ್‌ಟಿಎ ತಿಳಿಸಿದೆ.
67 ವಿದ್ಯಾರ್ಥಿಗಳು 720/720 ರಷ್ಟು ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ ಎಂದು ಅರ್ಜಿದಾರರ ಆರೋಪವನ್ನು ಅಲ್ಲಗಳೆದಿರುವ ಎನ್‌ಟಿಎ ಹಾಗೆ ಸಂಪೂರ್ಣ ಅಂಕ ಪಡೆದು ತೇರ್ಗಡೆಯಾದ ನಿಜವಾದ ಅಭ್ಯರ್ಥಿಗಳ ಸಂಖ್ಯೆ ಕೇವಲ 17 ಆಗಿದ್ದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲೇನೂ ಗಣನೀಯ ಏರಿಕೆ ಆಗಿಲ್ಲ ಎಂದಿದೆ.
ದೇಶದ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 56 ನಗರಗಳಲ್ಲಿ 95 ಕೇಂದ್ರಗಳ ಅತಿ ಹೆಚ್ಚು ಅಂಕ ಪಡೆದ 100 ಅಭ್ಯರ್ಥಿಗಳ ಫಲಿತಾಂಶಗಳನ್ನು ವಿಶ್ಲೇಷಿಸಲಾಗಿದೆ ಎಂದು ಎನ್‌ಟಿಎ ಹೇಳಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪ್ರಸಕ್ತ ನೀಟ್ - ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಹೇಳಿತ್ತು.
ಅಂತೆಯೇ ಸೋರಿಕೆಯ ಲಾಭ ಪಡೆದವರನ್ನು ಪತ್ತೆಹಚ್ಚಲು ಕೈಗೊಂಡ ಕ್ರಮಗಳು, ಸೋರಿಕೆಯಾದ ಕೇಂದ್ರಗಳು/ ನಗರಗಳನ್ನು ಗುರುತಿಸಲು ತೆಗೆದುಕೊಂಡ ಕ್ರಮಗಳು ಮತ್ತು ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ಅನುಸರಿಸಿದ ವಿಧಾನಗಳ ಬಗ್ಗೆ ತಿಳಿಸುವಂತೆ ನ್ಯಾಯಾಲಯ ಎನ್‌ಟಿಎಗೆ ನಿರ್ದೇಶಿಸಿತ್ತು. ಅದರಂತೆ ಎನ್‌ಟಿಎ ಪ್ರಸ್ತುತ ಅಫಿಡವಿಟ್ ಸಲ್ಲಿಸಿತ್ತು. ಇಂದು (ಗುರುವಾರ) ಕೂಡ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.