ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ನ ಖೇಡ್ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಪೊಲೀಸರು ಸಾರ್ವಜನಿಕವಾಗಿ ಥಳಿಸುತ್ತಿರುವ ವಿಡಿಯೊ ಗುಣಮಟ್ಟ ಸರಿಯಾಗಿಲ್ಲವಾದ್ದರಿಂದ ಎಲ್ಲಾ ಪೊಲೀಸರು ಮತ್ತು ಸಂತ್ರಸ್ತರನ್ನು ಅದರಲ್ಲಿ ಗುರುತಿಸಲಾಗಿಲ್ಲ ಎಂದು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಸಿಜೆಎಂ) ಅವರು ಗುಜರಾತ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದವರಲ್ಲಿ ನಾಲ್ವರು ಪೊಲೀಸರಲ್ಲಿ ಇಬ್ಬರು ಅಧಿಕಾರಿಗಳಾಗಿದ್ದಾರೆ. ಇದರಲ್ಲಿ ಒಬ್ಬರು ಸಂತ್ರಸ್ತರನ್ನು ಹೊಡೆಯುವಾಗ ಅವರ ಕೈಗಳನ್ನು ಎಳೆದು ಹಿಡಿದವರಾದರೆ , ಇನ್ನೊಬ್ಬರು ಸಾರ್ವಜನಿಕರ ಮಧ್ಯೆ ಖುರ್ಚಿಯಲ್ಲಿ ಕುಳಿತಿರುವವರಾಗಿದ್ದಾರೆ ಎಂದು ಸಿಜೆಎಂ ವರದಿಯಲ್ಲಿ ತಿಳಿಸಿದ್ದಾರೆ.
ಥಳಿಸುತ್ತಿರುವ ಪೊಲೀಸರು ಸಿವಿಲ್ ಉಡುಪು ಧರಿಸಿದ್ದು, ರೆಕಾರ್ಡ್ ಮಾಡಲಾದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅರ್ಜಿದಾರರನ್ನು ಕಂಬಕ್ಕೆ ಕಟ್ಟಿ, ಪೊಲೀಸರು ಲಾಠಿಯಲ್ಲಿ ಬಾರಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ವಿಡಿಯೊ ದೃಶ್ಯದಲ್ಲಿ ಪೊಲೀಸರು ಹೊಡೆಯುವುದನ್ನು ಸಾರ್ವಜನಿಕರು ಜೈಕಾರ ಹಾಕಿ ಹುರಿದುಂಬಿಸುವುದು, ವಂದೇ ಮಾತರಂ ಸೇರಿ ಹಲವು ಘೋಷಣೆಗಳನ್ನು ಕೂಗುತ್ತಿರುವುದು ದಾಖಲಾಗಿದೆ.
ಪೊಲೀಸರು ಸಾರ್ವಜನಿಕವಾಗಿ ಮುಸ್ಲಿಂ ವ್ಯಕ್ತಿಗಳಿಗೆ ಥಳಿಸುತ್ತಿರುವ ವಿಡಿಯೊ ಒಳಗೊಂಡ ಪೆನ್‌ಡ್ರೈವ್ ಮತ್ತು ಇತರೆ ವಿದ್ಯುನ್ಮಾನ ಸಾಕ್ಷಿಗಳನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಸುಪೆಯಾ ಮತ್ತು ಎಂ ಆರ್ ಮೆಂಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ಕಳೆದ ತಿಂಗಳು ನಾದಿಯಾ ಜಿಲ್ಲೆಯ ಸಿಜೆಎಂಗೆ ಆದೇಶಿಸಿತ್ತು.
ಉಧೇಲಾ ಗ್ರಾಮದಲ್ಲಿ ನವರಾತ್ರಿ ಸಂಭ್ರಮದ ವೇಳೆ ಕಲ್ಲು ತೂರಿದ ಆರೋಪದ ಮೇಲೆ ಖೇಡ್ ಜಿಲ್ಲೆಯ ಮತಾರ್ ಠಾಣೆಯ ಪೊಲೀಸರು ಮಲೇಕ್ ಕುಟುಂಬದ ಐವರಿಗೆ ಸಾರ್ವಜನಿಕವಾಗಿ ಥಳಿಸಿದ್ದರು. ತಮ್ಮನ್ನು ಬಂಧಿಸುವಾಗ ಸೂಕ್ತ ಕ್ರಮ ಅನುಸರಿಸಿಲ್ಲ, ಡಿ ಕೆ ಬಸು ವರ್ಸಸ್ ಪಶ್ಚಿಮ ಬಂಗಾಳ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ. ಈ ಸಂಬಂಧ ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಜೆಎಂ ಚೈತ್ರಾ ರತ್ನೊ ಅವರು ಕಳೆದ ತಿಂಗಳು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಇದರಲ್ಲಿ ವಿಡಿಯೊ ಮತ್ತು ಅದರಿಂದ ಪಡೆದಿರುವ ಚಿತ್ರಗಳು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳು ಸ್ಪಷ್ಟವಾಗಿಲ್ಲವಾದ್ದರಿಂದ ವಿಡಿಯೊದಲ್ಲಿರುವ ಎಲ್ಲ 14 ಮಂದಿ ಪೊಲೀಸರನ್ನು ಗುರುತಿಸುವುದು ಕಷ್ಟವಾಗಿದೆ ಎಂದು ಹೇಳಲಾಗಿದೆ.