ಪೊಲೀಸ್ ಠಾಣೆಯೊಳಗೆ ವೀಡಿಯೋ ಚಿತ್ರೀಕರಣವು ಅಧಿಕೃತ ರಹಸ್ಯ ಕಾಯಿದೆಯ ಸೆಕ್ಷನ್ 3ರ ಅಡಿ ʼಗೂಢಚರ್ಯೆʼ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಇತ್ತೀಚೆಗೆ ತಿಳಿಸಿದೆ. [ರವೀಂದ್ರ ಶೀತಲ್‌ರಾವ್ ಉಪಾಧ್ಯಾಯ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ನಿಷೇಧಿತ ಸ್ಥಳಗಳಲ್ಲಿ ಬೇಹುಗಾರಿಕೆಗಾಗಿ ಕಾಯಿದೆಯ ಸೆಕ್ಷನ್ 3 ದಂಡ ವಿಧಿಸುತ್ತದೆ. ಆದರೆ ಕಾಯಿದೆಯ ಸೆಕ್ಷನ್ 2(8)ರ ಅಡಿಯಲ್ಲಿ 'ನಿಷೇಧಿತ ಸ್ಥಳ'ದ ವ್ಯಾಖ್ಯಾನ ಪೊಲೀಸ್ ಠಾಣೆಗಳನ್ನು ಒಳಗೊಂಡಿಲ್ಲ ಎಂದು ನ್ಯಾಯಮೂರ್ತಿಗಳಾದ ಮನೀಶ್ ಪಿತಾಳೆ ಮತ್ತು ವಾಲ್ಮೀಕಿ ಎಸ್‌ಎ ಮೆನೇಜೆಸ್ ತಿಳಿಸಿದರು.
ಹೀಗಾಗಿ ಪೊಲೀಸ್ ಠಾಣೆ ನಡಾವಳಿಗಳನ್ನು ಚಿತ್ರೀಕರಿಸಿದ್ದ ವ್ಯಕ್ತಿಯ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿತು.
ಆರೋಪಿ ರವೀಂದ್ರ ಶೀತಲ್‌ರಾವ್ ಉಪಾಧ್ಯಾಯ ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ದೂರಿದ್ದರು. ಈ ಕಾಯಿದೆಯ ಸೆಕ್ಷನ್ 3ರ ಅಡಿ ಅವರನ್ನು ಬಂಧಿಸಲಾಗಿತ್ತು.