
ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ವಿಧಿಸಬೇಕು ಎಂದು ಕೋರಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿ ಸಂಬಂಧ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿ 10 ಬ್ಯಾಂಕ್‌ಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ದಿನಾಂಕ 10.04.2017ರಂತೆ ಸಾಲವಸೂಲಿ ನ್ಯಾಯಮಂಡಳಿಯು ಮಾಡಿರುವ ಮಾರ್ಪಡಿಸಲಾದ ತಿದ್ದುಪಡಿಯ ಅನುಸಾರ ಅರ್ಜಿದಾರ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ ಸಂಸ್ಥೆ (ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವ ಸಂಸ್ಥೆ) ಹಾಗೂ ಇತರೆ ಸಾಲ ಪಡೆದಿರುವ ಪ್ರಮಾಣಿತ ಸಂಸ್ಥೆಗಳು ತಮಗೆ ನೀಡಬೇಕಿರುವ ಬಡ್ಡಿಯನ್ನು ಒಳಗೊಂಡ ಹಣಕಾಸಿನ ವಿವರದ ಪಟ್ಟಿ ಹಾಗೂ ಇದಾಗಲೇ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಸ್ವತ್ತಿನ ಮಾಹಿತಿ ನೀಡುವಂತೆ ಸಾಲದಾತ ಸಂಸ್ಥೆಗಳಿಗೆ ಆದೇಶಿಸುವಂತೆ ಕೋರಿ ಯುನೈಟೆಡ್ ಕಿಂಗ್‌ಡಮ್ ನಿವಾಸಿಗಳಾಗಿರುವ ಡಾ. ವಿಜಯ್ ಮಲ್ಯ ಹಾಗೂ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ (ಯುಬಿಎಚ್‌ಎಲ್) ನಿರ್ದೇಶಕ ದಲ್ಜಿತ್ ಮಹಲ್ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.
ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಜೆ ಎಂ ಫೈನಾನ್ಶಿಯಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಪ್ರೈ.ಲಿ., ಯುಬಿಎಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ತುರ್ತು ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್ ಪೂವಯ್ಯ ಅವರು “ಇದು ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಕಿಂಗ್‌ಫಿಶರ್ ಮತ್ತು ಯುನೈಟೆಡ್ ಬ್ರಿವರೀಸ್‌ಗಳನ್ನು ಮುಚ್ಚುವ ಆದೇಶವಾಗಿದ್ದು, ಅದು ಅಂತಿಮಗೊಂಡಿದೆ. ಪರ್ಯಾಯವಾಗಿ ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ₹6,200 ಕೋಟಿ ಪಾವತಿಸಲು ಪ್ರಾಥಮಿಕ ಸಾಲಗಾರ ಸಂಸ್ಥೆ ಕಿಂಗ್‌ಫಿಶರ್‌ಗೆ ಆದೇಶಿಸಲಾಗಿತ್ತು. ಇದರಲ್ಲಿ ಕಿಂಗ್‌ಫಿಶರ್ ಮಾತೃಸಂಸ್ಥೆಯಾದ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ ಸಂಸ್ಥೆ ಗ್ಯಾರಂಟರ್ ಆಗಿತ್ತು. ಇದನ್ನೂ ಕಿಂಗ್‌ಫಿಶರ್ ಪ್ರಶ್ನಿಸಿದ್ದು, ಅದರಲ್ಲಿ ಸೋಲಾಗಿರುವುದರಿಂದ ಅದೂ ಅಂತಿಮಗೊಂಡಿದೆ” ಎಂದರು.
ಮುಂದುವರಿದು, “ವಸೂಲಾತಿ ಅಧಿಕಾರಿಯು 2007ರ ನಡುವೆ ₹6,200 ಕೋಟಿಯನ್ನು ಹಲವು ಬಾರಿ ವಸೂಲಿ ಮಾಡಿದ್ದು, ₹10,200 ಕೋಟಿ ವಸೂಲಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಬ್ಯಾಂಕ್‌ಗಳಿಗೆ ಇಡೀ ಹಣ ಬೇಕಿದೆ ಎಂದು ಅಧಿಕೃತ ಲಿಕ್ವಿಡೇಟರ್ ಹೇಳಿದ್ದಾರೆ. ಸಂಸತ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹14,000 ಕೋಟಿ ವಸೂಲಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಾಲವನ್ನು ವಾಪಸ್ ಮಾಡಲಾಗದು ಎಂದು ನಾನು ಅರ್ಜಿ ಸಲ್ಲಿಸಿಲ್ಲ. ಕಂಪನಿ ಕಾಯಿದೆಯ ಅನ್ವಯ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದರೆ ಗ್ಯಾರಂಟರ್ ಕಂಪನಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಕಂಪೆನಿಯ ಪುನಶ್ಚೇತನವು ಸಾಲವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಸಾಲ ವಸೂಲಾತಿ ಅಧಿಕಾರಿಯು ಸರ್ಟಿಫಿಕೇಟ್ ನೀಡಿದ ಮೇಲೆ ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಹಣ, ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಲಾಗಿದೆ. ಬ್ಯಾಂಕ್‌ಗಳನ್ನು ಪ್ರತಿವಾದಿಗಳನ್ನಾಗಿಸಿರುವುದರಿಂದ ಏಕಪಕ್ಷೀಯ ಆದೇಶ ಕೋರುತ್ತಿಲ್ಲ. ಈಗ ನೋಟಿಸ್ ಜಾರಿ ಮಾಡಬೇಕು” ಎಂದು ಕೋರಿದರು.