N R Santosh & Bengaluru city civil court
N R Santosh & Bengaluru city civil court

ಬಿಎಸ್‌ವೈ ಮಾಜಿ ಆಪ್ತ ಸಹಾಯಕ ಸಂತೋಷ್‌ ನಿರೀಕ್ಷಣಾ ಜಾಮೀನು ರದ್ದತಿಗೆ ಮನವಿ: ಆಕ್ಷೇಪಣೆ ಸಲ್ಲಿಕೆಗೆ ನ್ಯಾಯಾಲಯ ಆದೇಶ

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಆಪ್ತ ಸಹಾಯಕ ಎನ್‌ ಎಸ್‌ ವಿನಯ್ ಅಪಹರಣ ಪ್ರಕರಣದಲ್ಲಿ ಎನ್‌ ಆರ್‌ ಸಂತೋಷ್‌ ಮೊದಲ ಆರೋಪಿಯಾಗಿದ್ದಾರೆ.
Published on

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಆಪ್ತ ಸಹಾಯಕ ಎನ್‌ ಎಸ್‌ ವಿನಯ್ ಅಪಹರಣಕ್ಕೆ ಯತ್ನಿಸಿದ ಆರೋಪದಲ್ಲಿ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಕೋರಿಕೆಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ಮೊದಲ ಆರೋಪಿಯಾಗಿರುವ ಎನ್ ಆರ್ ಸಂತೋಷ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯ ನಿರ್ದೇಶಿಸಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಎನ್‌ ಆರ್ ಸಂತೋಷ್‌ ಪ್ರಸ್ತುತ ಹಾಲಿ ಜೆಡಿಎಸ್‌ ಮುಖಂಡರಾಗಿದ್ದಾರೆ.

ಸಂತೋಷ್‌ಗೆ ನೀಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಪ್ರಕರಣದ ದೂರುದಾರ ಎನ್‌ ಎಸ್‌ ವಿನಯ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಜೆ ಬಿ ಕೃಷ್ಣಮೂರ್ತಿ ವಿಚಾರಣೆ ನಡೆಸಿದರು.

ದೂರುದಾರ ವಿನಯ್‌ ಅವರು ಸಂತೋಷ್‌ ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಕೋರಿದ್ದಾರೆ. ಸಂತೋಷ್‌ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕೋರಿರುವುದಕ್ಕೆ ನ್ಯಾಯಾಲಯ ಅನುಮತಿಸಿದ್ದು, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿದೆ.

ವಿನಯ್‌ ಅಪಹರಣಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2017ರ ಮೇ 11ರಂದು ನಡೆದಿತ್ತು. ಈ ಕುರಿತು ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ವಿನಯ್‌ ದೂರು ನೀಡಿದ್ದರು. ಪ್ರಕರಣದಲ್ಲಿ ಸಂತೋಷ್‌ ಮೊದಲ ಆರೋಪಿಯಾಗಿದ್ದಾರೆ. ಅವರಿಗೆ 2017ರ ಆಗಸ್ಟ್‌ 5ರಂದು 59ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿತ್ತು. ಸಂತೋಷ್‌ ಮತ್ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದರೆ ನಿರೀಕ್ಷಣಾ ಜಾಮೀನಿನ ಬಾಂಡ್‌ಗಳು ತನ್ನಿಂದ ತಾನೇ ರದ್ದಾಗುತ್ತವೆ ಎಂದು ಇದೇ ವೇಳೆ ನ್ಯಾಯಾಲಯ ಷರತ್ತು ವಿಧಿಸಿತ್ತು.

ಇದೀಗ ಕೋರ್ಟ್‌ ಮೆಟ್ಟಿಲೇರಿರುವ ದೂರುದಾರ ವಿನಯ್‌ ಅವರು, ಸಂತೋಷ್‌ ಸೇರಿದಂತೆ ಒಟ್ಟು 14 ಮಂದಿ ವಿರುದ್ಧ ಅಕ್ರಮ ಕೂಟ, ಸಂಘಟಿತ ಅಪರಾಧ ಕೃತ್ಯ ಎಸಗಿದ, ಹಾಸನದ ಅರಸೀಕೆರೆ ನಗರಸಭೆಯ ಉಪಾಧ್ಯಕ್ಷ ಮೋಹನ್‌ ಅವರಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 2025ರ ಜನವರಿ 26ರಂದು ಅರಸೀಕೆರೆ ಟೌನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆದ್ದರಿಂದ, ಈ ಹಿಂದೆ ನ್ಯಾಯಾಲಯ ವಿಧಿಸಿರುವ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂತೋಷ್‌ಗೆ ಮಂಜೂರು ಮಾಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಎನ್‌ ಆರ್‌ ಸಂತೋಷ್‌, ರಾಜೇಂದ್ರ ರಾಜ್‌ ಅರಸ್‌ ಪ್ರಶಾಂತ್‌ ಕುಮಾರ್‌, ಕಿಶೋರ್‌, ಅಯ್ಯಪ್ಪ, ಸೆಲ್ವಾ ಅಲಿಯಾಸ್‌ ಪಾಪತೈ, ಅಭಿಷೇಕ್‌ ರಾವ್‌ ಅಲಿಯಾಸ್‌ ತ್ರಿಲೋಕ್‌ ರಾವ್‌, ಶಿವಪ್ಪ, ಅರವಿಂದ್‌ ಅಲಿಯಾಸ್‌ ಲೀ, ಉಮಾಕಾಂತ್‌, ಇಂದ್ರೇಶ್‌ ಮತ್ತು ಅರವಿಂದ್‌ ರೆಡ್ಡಿ ಆರೋಪಿಗಳಾಗಿದ್ದು, ಇವೆಲ್ಲರ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 323, 325, 364, 511, 331, 120ಬಿ, 149ರ ಅಡಿ ಪ್ರಕರಣ ದಾಖಲಾಗಿದೆ.

Kannada Bar & Bench
kannada.barandbench.com