ಕಳೆದ ಲೋಕಸಭಾ ಚುನಾವಣೆ ವೇಳೆ ನಡೆದಿದೆ ಎನ್ನಲಾದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧದ ಎಫ್‌ಐಆರ್ ಹಾಗೂ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಮುಂದಿನ ಆದೇಶದವರೆಗೆ ಪ್ರಕರಣದ ವಿಚಾರಣೆಗೆ ತಡೆ ನೀಡಿದ್ದು, ಆಗಸ್ಟ್ 2ಕ್ಕೆ ವಿಚಾರಣೆ ಮುಂದೂಡಿದೆ.
“ಅರ್ಜಿದಾರರು ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದರೆ ಮತ್ತು ಸಿಆರ್‌ಪಿಸಿ ಸೆಕ್ಷನ್ 155ರ ಪ್ರಕಾರ, ಚುನಾವಣಾ ನೀತಿ ಉಲ್ಲಂಘನೆ ಸಂಬಂಧ ಮೊದಲು ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಿ, ಅವರಿಂದ ತನಿಖೆ ಆದೇಶ ಪಡೆದ ನಂತರವೇ ತನಿಖೆ ನಡೆಸಬಹುದಾಗಿದೆ. ನೇರವಾಗಿ ಪೊಲೀಸರಿಗೆ ದೂರು ನೀಡುವಂತಿಲ್ಲ. ಹಾಗಾಗಿ, ಸದ್ಯಕ್ಕೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶದದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು “ನಿಯಮದಂತೆ ಚುನಾವಣಾ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಮೊದಲು ಮ್ಯಾಜಿಸ್ಟ್ರೇಟ್ ಮುಂದೆ ದೂರು ಸಲ್ಲಿಸಿ, ಅವರ ಸಂಜ್ಞೇಯದ ನಂತರ ತನಿಖೆ ನಡೆಸಬೇಕು. ಆದರೆ ಇದರಲ್ಲಿ ನೇರವಾಗಿ ಪೊಲೀಸರೇ ದೂರು ದಾಖಲಿಸಿದ್ದಾರೆ. ಹಾಗಾಗಿ ಪ್ರಕರಣ ರದ್ದು ಮಾಡಬೇಕು” ಎಂದು ಕೋರಿದರು.
2019ರ ಲೋಕಸಭಾ ಚುನಾವಣೆ ವೇಳೆ ಏಪ್ರಿಲ್ 13ರಂದು ದೊಡ್ಡನೆಕ್ಕುಂದಿ ಗ್ರಾಮದಲ್ಲಿ ಶ್ರೀರಾಮನವಮಿ ಪ್ರಯುಕ್ತ ಜಾತ್ರೆ ಮತ್ತು ಪಲ್ಲಕ್ಕಿ ನಡೆಯುತ್ತಿತ್ತು. ಆಗ ರಿಜ್ವಾನ್ ಅರ್ಷದ್ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಅವರನ್ನು ಪ್ರಚಾರಕ್ಕೆ ಅನುಮತಿ ಇದೆಯೆ ಎಂದು ಕೇಳಿದ್ದಕ್ಕೆ ಅವರು, ಹೌದು ಅನುಮತಿ ಪಡೆಯಲಾಗಿದೆ ಎಂದು ಹೇಳಿದ್ದರು. ವಾಸ್ತವದಲ್ಲಿ ಅವರು ಪ್ರಚಾರ ನಡೆಸಲು ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಅರ್ಷದ್ ವಿರುದ್ಧ ಐಪಿಸಿ ಸೆಕ್ಷನ್ 171(1) ಮತ್ತು ಜನಪ್ರತಿನಿಧಿಗಳ ಕಾಯಿದೆ ಸೆಕ್ಷನ್ 144ರನ್ವಯ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಸಿ ವೆಂಕಟೇಶ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು.